ಕಲಬುರಗಿ | ಮನುವಾದಿ ಅಮಿತ್ ಶಾ ಅವರ ಹೀನ ಮನಸ್ಥಿತಿ ಬಯಲಿಗೆ ಬಿದ್ದಿದೆ : ಡಾ.ಡಿ.ಜಿ.ಸಾಗರ್
ಕಲಬುರಗಿ : ಸದನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತಾಗಿ ಅವಹೇಳನಕಾರಿ ಹೇಳಿಕೆ ನೀಡಿದ ಕೇಂದ್ರ ಸಚಿವರಾಗಿರುವ ಮನುವಾದಿ ಅಮಿತ್ ಶಾ ನ ಹೀನ ಮನಸ್ಥಿತಿ ಬಯಲಿಗೆ ಬಿದ್ದಿದೆ, ಕೂಡಲೇ ಆತನಿಂದ ರಾಜೀನಾಮೆ ಪಡೆಯಬೇಕು, ಇಲ್ಲದಿದ್ದರೆ ರಾಜೀನಾಮೆ ಕೊಡೋವರೆಗೂ ಹೋರಾಟ ನಿಲ್ಲಿಸಲ್ಲ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಮಿತ್ ಶಾ ಹೇಳಿಕೆ ಖಂಡಿಸಿ, ಡಿ.24ರಂದು ದಲಿತ ಪರ ಸೇರಿದಂತೆ ಮತ್ತಿತರ ಸಂಘಟನೆಗಳು ಕಲಬುರಗಿ ಬಂದ್ ಗಾಗಿ ಕರೆ ನೀಡಿದ್ದು, ಈ ಕರೆಗೆ ನಮ್ಮ ಸಂಘಟನೆಯು ಸಂಪೂರ್ಣ ಬೆಂಬಲಿಸಲಿದೆ. ಜೊತೆಗೆ ಪ್ರತ್ಯೇಕವಾಗಿ 2025ರ ಜ.6ರಂದು ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿ, ಆಯಾ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಸಂವಿಧಾನಕ್ಕೆ 75 ವರ್ಷಗಳು ತುಂಬಿದ ಬೆನ್ನಲ್ಲೇ ಅಮಿತ್ ಶಾ ಈ ರೀತಿಯ ಹೇಳಿಕೆ ನೀಡಿರುವುದು ಕೋಟ್ಯಂತರ ಜನರಿಗೆ ಅವಮಾನ ಮಾಡಿದಂತಾಗಿದೆ, ಆತ ಕೂಡಲೇ ರಾಜೀನಾಮೆ ನೀಡಬೇಕು, ಇಲ್ಲದಿದ್ದರೆ ಪ್ರಧಾನಿಗಳು ಆತನನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಡಾ.ಅಂಬೇಡ್ಕರ್ ಅವರು ಸಂವಿಧಾನದ ಅಡಿಯಲ್ಲಿ ದೇಶದ ಜನರಿಗೆ ಸಾಮಾಜಿಕ ನ್ಯಾಯ, ಮೀಸಲಾತಿ ಸೇರಿದಂತೆ ಸ್ವಾಭಿಮಾನಿಯಾಗಿ ಬದುಕಲು ಹಕ್ಕುಗಳು ಒದಗಿಸಿದ್ದಾರೆ, ಅಂತಹ ಅಂಶಗಳನ್ನೇ ವಿರೋಧಿಯಾಗಿಸಿ ನೇರವಾಗಿ ಅಂಬೇಡ್ಕರ್ ಅವರನ್ನೇ ಗುರಿಯಾಗಿಟ್ಟುಕೊಂಡು ಬಿಜೆಪಿ ಆಗಿನಿಂದಲೂ ಅವರನ್ನು ಅಪಮಾನಿಸುತ್ತಲೇ ಬಂದಿದೆ, ಇಂದು ಬಿಜೆಪಿ ಸರಕಾರ ಜಾತಿವಾದಿ, ದಲಿತ ವಿರೋಧಿ ಎನ್ನುವುದು ಸಚಿವ ಅಮಿತ್ ಶಾ ನಿಂದ ಬಟಾ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಜಿಲ್ಲಾ ಮುಖಂಡ ಸುರೇಶ್ ಹಾದಿಮನಿ ಮಾತನಾಡಿ, 2025ರ ಜ.6ರಂದು ಜಿಲ್ಲಾ ಸಮಿತಿಯಿಂದ ಬೆಳಗ್ಗೆ 11.30 ಗಂಟೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದ ಅವರು, 24ರಂದು ನಡೆಯಲಿರುವ ಕಲಬುರಗಿ ಬಂದ್ ಕರೆಯಲ್ಲಿ ಒಟ್ಟಾರೆಯಾಗಿ 45 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿ.ಸಿ ವಾಲಿ, ಹೆಚ್.ಶಂಕರ್, ರೇವಣಸಿದ್ಧ ಜಾಲಿ ಸೇರಿದಂತೆ ಮತ್ತಿತರ ಮುಖಂಡರು ಹಾಜರಿದ್ದರು.