ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿರ್ಲಕ್ಷ್ಯ ಸಲ್ಲದು : ಶಶೀಲ್ ಜಿ.ನಮೋಶಿ
ಕಲಬುರಗಿ : ಕಲ್ಯಾಣ ಕರ್ನಾಟಕದ ಭಾಗದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ ಎಂದು ಹೇಳುವ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಈ ಬಾರಿ ನಡೆದ ಬೆಳಗಾವಿಯಲ್ಲಿ ನಡೆದ ಚಳಿಗಾಲ ಅಧಿವೇಶನದಲ್ಲಿ ಕಲ್ಯಾಣ ಕರ್ನಾಟಕದ ವಿಷಯಗಳ ಚರ್ಚೆಗೆ ಅವಕಾಶ ನೀಡದೆ ಇರುವುದು ಅತ್ಯಂತ ದುರದೃಷ್ಟಕರ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಖೇದ ವ್ಯಕ್ತಪಡಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕಲ್ಯಾಣ ಕರ್ನಾಟಕ ಕೇಂದ್ರ ಭಾಗವಾದ ಕಲಬುರಗಿಯಲ್ಲಿ 19 ನೇಯ ರಾಜ್ಯ ಸಚಿವ ಸಂಪುಟ ಸಭೆ ನಡೆಸಿ 46 ನಿರ್ಣಯಗಳನ್ನು ಈ ಭಾಗದ ಕಲ್ಯಾಣಕ್ಕಾಗಿ ಘೋಷಣೆ ಮಾಡಿದರು. ಈ ಘೋಷಣೆ ಮಾಡಿ ಎರಡು ತಿಂಗಳುಗಳು ಕಳೆದು ಈಗ ಚಳಿಗಾಲದ ಅಧಿವೇಶನದಲ್ಲಿ ಅದರ ಚರ್ಚೆಗೂ ಅವಕಾಶ ನೀಡದ ಸರ್ಕಾರ ಕಾರ್ಯಕ್ಕಿಂತ ಘೋಷಣೆ ಮುಖ್ಯ ಎಂಬುದನ್ನು ಸಾಬೀತು ಪಡಿಸಿದೆ. 46 ಘೋಷಣೆಗಳು ಘೋಷಣೆಯಾಗಿಯೆ ಉಳಿದಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರೊ. ಡಿ.ಎಂ.ನಂಜುಂಡಪ್ಪ ವರದಿ ಹಾಗೂ ಇತರೆ ವರದಿಗಳ ಆಧಾರದ ಮೇಲೆ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಹಾಗೂ ಈ ಭಾಗದ ಅನೇಕ ಹೋರಾಟಗಾರರ ಹೋರಾಟದ ಫಲವಾಗಿ 98ನೇ ಸಂವಿಧಾನದ ತಿದ್ದುಪಡಿ ಪ್ರಕಾರ 371 ಜೆ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ಉದ್ಯೋಗ ಅವಕಾಶ ನೀಡಲು 2013ರಲ್ಲಿ ಸರ್ಕಾರ ಜಾರಿ ಮಾಡಿತು, ಆದರೆ ಈಗ ದಶಕಗಳು ಕಳೆದರೂ ಸಮಸ್ಯೆಗಳು ಸಮಸ್ಯೆಗಳಾಗಿಯೆ ಉಳಿದಿವೆ ಎಂದರು.
ಶಿಕ್ಷಣ, ಉದ್ಯೋಗ, ಅನುದಾನ ಮೀಸಲು, ಭಡ್ತಿ ಸೇರಿ ಇನ್ನಿತರ ಕ್ಷೇತ್ರಗಳಲ್ಲಿ ಕಲಂ 371(ಜೆ) ಉಲ್ಲಂಘನೆ ನಿರಂತರವಾಗಿದೆ. ಹೈಕ ಭಾಗದಲ್ಲಿ ಶಿಕ್ಷಣ, ಉದ್ಯೋಗ ಮತ್ತು ಬಡ್ತಿಯಲ್ಲಿ ಶೇ.80 ಮೀಸಲಾತಿ ಅನುಷ್ಠಾನವಾಗಿದೆ. ಬೆಂಗಳೂರು ಸಚಿವಾಲಯ ಸೇರಿ ಖಾಸಗಿ ಶಾಲಾ-ಕಾಲೇಜು ಮತ್ತು ಭಡ್ತಿ ವಿಷಯದಲ್ಲಿ ಸರಕಾರ ಕಲಂ 371(ಜೆ)ಯನ್ನು ಸಮರ್ಪಕವಾಗಿ ಜಾರಿ ಮಾಡಿಲ್ಲ, ಈಗಾಗಲೇ ಶಿಕ್ಷಣ ಸಚಿವರು 59,000 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಹೇಳಿದ್ದಾರೆ ಅದರಲ್ಲಿ ಬಹುಪಾಲು ಹುದ್ದೆಗಳು ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇವೆ, ಹೀಗಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಈ ಭಾಗ ಹಿಂದುಳಿಯಲು ಕಾರಣವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.