ಕಲಬುರಗಿ | ಅಭಿವೃದ್ಧಿಗೆ ಜನಾಂಗ ಮುಖ್ಯವಲ್ಲ: ಡಾ.ಟಿ.ಆರ್.ಚಂದ್ರಶೇಖರ್ ಅಭಿಪ್ರಾಯ

Update: 2024-12-21 15:18 GMT

ಕಲಬುರಗಿ : ಅಸಮಾನತೆಯನ್ನು ತೊಡೆದು ಹಾಕಲು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕೇಂದ್ರ ಸರಕಾರ ಒತ್ತು ನೀಡಿ, ವಿಶೇಷ ಪ್ಯಾಕೇಜ್ ಘೋಷಿಸಬೇಕು, ಈ ಭಾಗದಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಹೆಚ್ಚಿರುವುದರಿಂದ ಕೇಂದ್ರ ನಿರಾಸಕ್ತಿ ತೋರುತ್ತಿದೆ, ಈ ಅಭಿವೃದ್ಧಿಗೆ ಜನಾಂಗ ಮುಖ್ಯವಲ್ಲ ಎಂದು ಆರ್ಥಿಕ ತಜ್ಞ ಡಾ.ಟಿ.ಆರ್.ಚಂದ್ರಶೇಖರ್ ಅವರು ಅಭಿಪ್ರಾಯಪಟ್ಟರು.

ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ) ಜಿಲ್ಲಾ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ 'ಹೈದರಾಬಾದ್ ಕರ್ನಾಟಕ ಅಭಿವೃದ್ಧಿ- ಸಮಸ್ಯೆ ಸವಾಲುಗಳು' ಎಂಬ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕದ ವಿಶೇಷ ಅಭಿವೃದ್ಧಿಗೆ ಕೇವಲ ರಾಜ್ಯ ಸರಕಾರದಿಂದ ಮಾತ್ರ ಸಾಧ್ಯವಿಲ್ಲ, ಅದರ ಬದಲಾಗಿ ಕೇಂದ್ರದ ಬಿಜೆಪಿ ಸರಕಾರಕ್ಕೆ ಕಾಳಜಿ ಇರಬೇಕಿತ್ತು, ಆದರೆ ಈ ವ್ಯಾಪ್ತಿಯಲ್ಲಿ ಮುಸ್ಲಿಂ ಜನಾಂಗ ಹೆಚ್ಚಾಗಿ ಕಾಣಿಸುವುದರಿಂದ ಅಭಿವೃದ್ಧಿಗೆ ಹಣ ಒದಗಿಸುತ್ತಿಲ್ಲ ಎಂದು ಬೇಸರ ಹೊರಹಾಕಿದರು.

ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ಕ್ಷೇತ್ರದ ಸುಧಾರಣಾ ಸಮಿತಿಗೆ ಗುರುರಾಜ್ ಕರ್ಜಗಿ ಅವರನ್ನು ನೇಮಕ ಮಾಡಿದೆ, ಹೆಚ್ಚಾಗಿ ಈ ಭಾಗದಲ್ಲಿ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳನ್ನು ಪಡೆದು ಜೀವನ ಸಾಗಿಸುತ್ತಿದ್ದಾರೆ. ಅಂತಹ ಯೋಜನೆಗಳಿಗೆ ಕರ್ಜಗಿ ಅಪಹಾಸ್ಯ ಮಾಡಿದ್ದಾರೆ. 'ಈ ಯೋಜನೆಗಳು ಜನರಿಗೆ ಸೋಮಾರಿಯಾಗಿ ಮಾಡುತ್ತವೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಇಂತಹ ಹೇಳಿಕೆ ನೀಡಿರುವ ಅವರಿಗೆ ಕಲ್ಯಾಣ ಕರ್ನಾಟಕ ಪ್ರವೇಶಕ್ಕೆ ಬಿಡಬಾರದು' ಎಂದು ಕಿಡಿಕಾರಿದರು.

ಹಿಂದುಳಿದ ಪ್ರದೇಶ ಎಂದು ಹಣೆಪಟ್ಟಿ ಬರೆದುಕೊಂಡಿರುವ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಅಭಿವೃದ್ಧಿಗೆ 5 ಅಂಶಗಳು ಮುಖ್ಯವಾಗಿವೆ. ಅವುಗಳಲ್ಲಿ ಪ್ರಾಥಮಿಕ ಶಿಕ್ಷಣ, ಪ್ರಾಥಮಿಕ ಆರೋಗ್ಯ, ವಸತಿ, ಶುದ್ಧ ಕುಡಿಯುವ ನೀರು ಮತ್ತು ಅಪೌಷ್ಟಿಕತೆ ನಿವಾರಣೆ. ಹೀಗೆ ಈ ಅಂಶಗಳನ್ನು ಮುಂದಿಟ್ಟುಕೊಂಡು ಮುಂದೆ ಹೋದಾಗ ಪ್ರಗತಿ ಸಾಧಿಸಬಹುದು ಎಂದು ವಿಷಯ ಮಂಡಿಸಿದರು.

ಕೆಕೆಆರ್ ಡಿಬಿ ಕಂಟ್ರಾಕ್ಟರ್ ದಾರರ ಕೇಂದ್ರ ಮತ್ತು ಕಮಿಷನ್ ಕೇಂದ್ರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಇದೊಂದು ಅಭಿವೃದ್ಧಿ ಕೇಂದ್ರವಾಗಿ ಮಾರ್ಪಡಬೇಕು ಎಂದು ಹೇಳಿದರು.

ಜನಶಕ್ತಿ ಪತ್ರಿಕೆಯ ಸಂಪಾದಕ ಎಸ್.ವೈ.ಗುರುಶಾಂತ್ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಭೂಮಿ ಇಲ್ಲದವರು ಹೆಚ್ಚಿನ ಕೃಷಿ, ಕೂಲಿ ಕಾರ್ಮಿಕರಿದ್ದಾರೆ, ಇಲ್ಲಿ ಭೂ ಸುಧಾರಣೆ ಕಾನೂನು ಸೇರಿದಂತೆ ಕೃಷಿ ಮತ್ತು ಕಾರ್ಮಿಕರಿಗೆ ಸಂಬಂಧಿಸಿದ ಇತರೆ ಕಾಯ್ದೆಗಳು ಸಮರ್ಪಕವಾಗಿ ಅನುಷ್ಠಾನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹೋರಾಟಗಾರ ಲಕ್ಷ್ಮಣ್ ದಸ್ತಿ ಮಾತನಾಡಿ, ಹಿಂದಿನ ಹೈದರಾಬಾದ್ ಕರ್ನಾಟಕದ ರಾಜಕೀಯ ಬೆಳವಣಿಗೆ ಮತ್ತು 371 (ಜೇ) ಕಲಂ ಗಾಗಿ ನಡೆಸಿದ ಹೋರಾಟಗಳ ಕುರಿತಾಗಿ ಇತಿಹಾಸವನ್ನು ಮೆಲುಕು ಹಾಕಿದರು.

ವಿಚಾರ ಸಂಕಿರಣ ಸಮಾರಂಭದಲ್ಲಿ ಯು.ಬಸವರಾಜ್ ಅವರು ಅಧ್ಯಕ್ಷತೆ ವಹಿಸಿದ್ದರು. ಕೆ.ನೀಲಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಹಲವು ಶಿಕ್ಷಣ ತಜ್ಞರು, ಇತಿಹಾಸಕಾರರು, ಹೋರಾಟಗಾರರು ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News