ಕಲಬುರಗಿ | ಕಲಾವಿದ ರೆಹಮಾನ್ ಪಟೇಲ್ ಗೆ ಜೈನ್ ವಿವಿಯಿಂದ ಅಂತರ್‌ರಾಷ್ಟ್ರೀಯ ಪ್ರಶಸ್ತಿ
ಕಲಬುರಗಿ : ಇಲ್ಲಿನ ಕಲಾವಿದ ರೆಹಮಾನ್ ಪಟೇಲ್ ಅವರಿಗೆ ಜೈನ್ (ಸ್ವಾಯತ್ತ) ವಿಶ್ವವಿದ್ಯಾಲಯವು ಆಯೋಜಿಸಿದ ಭಾರತ ಅಂತರ್ ರಾಷ್ಟ್ರೀಯ ಕಲೆ ವಾರ್ಷಿಕ ಪ್ರದರ್ಶನದಲ್ಲಿ ‘ಬೆಸ್ಟ್ ಕ್ರಿಯೇಶನ್ ಜ್ಯೂರಿ ಚಾಯ್ಸ್ ಸ್ಪೆಷಲ್ ಅವಾರ್ಡ್’ ನೀಡಿ ಗೌರವಿಸಲಾಗುವುದು ಎಂದು ಪ್ರಕಟಿಸಿದೆ.
ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಸಾರ್ವಜನಿಕ ಜಾಗೃತಿಯನ್ನು ಸೃಷ್ಟಿಸಲು ರಚಿಸಲಾದ ಪಟೇಲ್ ಅವರ ಚಿತ್ರಕಲೆಯ ಪ್ರದರ್ಶನದಲ್ಲಿ ಈ ಪ್ರಶಸ್ತಿ ಒಲಿದುಬಂದಿದೆ. ಲಾಕ್ಡೌನ್ ನಿಯಮಾವಳಿಗಳನ್ನು ಉಲ್ಲಂಘಿಸುತ್ತಿದ್ದ ಜನರ ನಿರ್ಲಕ್ಷ್ಯದಿಂದ ತೀವ್ರ ನಿರಾಸೆಯಾದ ಪಟೇಲ್ ತಮ್ಮ ಭಾವನೆಗಳನ್ನು ಕಲೆಯ ಮೂಲಕ ವ್ಯಕ್ತಪಡಿಸಿದ್ದಾರೆ. ‘ದಿ ಲಾಸ್ಟ್ ಆಪ್ಷನ್’ ಎಂದು ಹೆಸರಿಸಲಾದ ಈ ಕಲಾಕೃತಿಯಲ್ಲಿ ‘ಗಿ’ ಆಕೃತಿಯಲ್ಲಿ ಸರಿಪಡಿಸಲಾದ ಚಪ್ಪಲಿಗಳ ಜೋಡಿಯನ್ನು ವೀಕ್ಷಿಸಬಹುದು, ಇದು ವಿಜಯದ ಸಂಕೇತವಾಗಿದೆ.
ಈ ಚಿತ್ರವನ್ನು ಡಿ.30 ರವರೆಗೆ ವಿಶ್ವವಿದ್ಯಾಲಯ ಕ್ಯಾಂಪಸ್ನಲ್ಲಿ ಮೂರು ದಿನಗಳ ಕಾಲ ಪ್ರದರ್ಶಿಸಲಾಗುತ್ತದೆ. ಪ್ರದರ್ಶನದ ಸಂಚಾಲಕರಾದ ಡಾ.ಅವಿನಾಶ್ ಕಾಟೆ, ಡಿ.28ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಜಯನಗರ 8ನೇ ಬ್ಲಾಕ್, ನಾಲೇಜಿಯಮ್ ಅಕಾಡೆಮಿಯಲ್ಲಿ ಪ್ರಶಸ್ತಿ ಸಮಾರಂಭ ನಡೆಯಲಿದೆ ಎಂದು ತಿಳಿಸಿದ್ದಾರೆ.