ಕಲಬುರಗಿ | ವಕ್ಫ್ ಬೋರ್ಡ್ ವಿರುದ್ಧ ಬಿಜೆಪಿಯಿಂದ ಪ್ರತಿಭಟನೆ

Update: 2024-11-04 13:04 GMT

ಕಲಬುರಗಿ : ವಕ್ಫ್ ಆಸ್ತಿ ಹೆಸರಿನಲ್ಲಿ ರೈತರ ಮೇಲೆ ದಬ್ಬಾಳಿಕೆ ನಡೆಸಿ ಈ ನೆಲದ ಮಣ್ಣಿನ ಮಕ್ಕಳ ಭೂಮಿಯ ಹಕ್ಕು ಕಸಿಯಲು ಹೊರಟಿರುವ ಕಾಂಗ್ರೆಸ್ ಸರಕಾರ ವಕ್ಫ್ ಬೋರ್ಡ್ ನಿಂದ ರೈತರ ಭೂಮಿಗಳನ್ನು ಕಬಳಿಸಲು ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಪಿಸಿ ಸೋಮವಾರ ಬಿಜೆಪಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ತರಾತುರಿಯಲ್ಲಿ ನೀಡಲಾಗಿರುವ ವಕ್ಫ್ ಬೋರ್ಡ್ನ ನೋಟಿಸ್ನಿಂದ ರಾಜ್ಯದ ಸಾವಿರಾರು ರೈತರು ಮತ್ತು ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ದೇಶದಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಜಾರಿಯಾಗುವುದಕ್ಕೂ ಮುಂಚಿತವಾಗಿ ಕರ್ನಾಟಕದಲ್ಲಿ ಸಾಧ್ಯವಾದಷ್ಟು ಜಾಗವನ್ನು ವಕ್ಫ್ ಹೆಸರಿಗೆ ನೋಂದಣಿಗೊಳಿಸಬೇಕು ಎನ್ನುವ ಹುನ್ನಾರ ನಡೆಸುತ್ತಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಸಚಿವ ಝಮೀರ್ ಅಹ್ಮದ್ ರಾಜ್ಯದ ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳಿಗೆ ಮತ್ತು ಮುಸ್ಲಿಂ ಸಮಾಜದ ಮುಖಂಡರ ಜೊತೆ ಸಭೆ ನಡೆಸಿ ವಕ್ಫ್ ಬೋರ್ಡ್ ಹೆಸರಿಗೆ ರಿಜಿಸ್ಟರ್ ಮಾಡಿಸಲು ಸೂಚನೆ ನೀಡಿದ್ದಾರೆ. ಸಚಿವರ ಅದೇಶದ ಮೇರೆಗೆ ಜಿಲ್ಲಾಧಿಕಾರಿಗಳು, ತಲೆಮಾರುಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ರೈತರ ಜಮೀನಿನ ಪಹಣಿಗಳನ್ನು ರಾತ್ರೋರಾತ್ರಿ ಬದಲಾವಣೆ ಮಾಡಿದ್ದಾರೆ. 1920ರಿಂದ ಇಲ್ಲಿ ರೈತರು ಸಾಗುವಳಿ ಮಾಡಿಕೊಂಡು ಬಂದಿರುವ ದಾಖಲೆಗಳಿದ್ದರೂ ಸಹ ರೈತರ ಜಮೀನು ಮಾತ್ರವಲ್ಲದೇ ಹಿಂದೂಗಳ ರುದ್ರಭೂಮಿ , ದೇವಸ್ಥಾನಗಳಿಗೂ ಸಹ ವಕ್ಫ್ ಆಸ್ತಿಯನ್ನು ಅಕ್ರಮವಾಗಿ ಕಬಳಿಕೆ ಮಾಡಲು ಮುಂದಾಗಿರುವುದು ಸರಿಯಲ್ಲ. ಸಚಿವ ಝಮೀರ್ ಅಹ್ಮದ್ ಅವರು ಕೂಡಲೇ ರಾಜೀನಾಮೆ ಕೊಡಬೇಕೆಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ, ವಿಪ ಸದಸ್ಯ ಶಶೀಲ ನಮೋಶಿ, ಶಾಸಕ ಡಾ.ಅವಿನಾಶ ಜಾಧವ, ಮುಖಂಡರಾದ ಗಿರಿರಾಜ ಯಳಮೇಲಿ, ದಯಾನಂದ ಧಾರವಾಡಕರ್, ಅಮರನಾಥ ಪಾಟೀಲ, ಶಿವಾನಂದ ಪಿಸ್ತಿ,ಸಚಿನ್ ಕಡಗಂಚಿ, ಡಾ. ಸುಧಾ ಹಾಲಕಾಯಿ, ದೇವೀಂದ್ರದೇಸಾಯಿ ಕಲ್ಲೂರ, ಶ್ರೀನಿವಾಸ ದೇಸಾಯಿ, ನಾಮದೇವ ರಾಠೋಡ,ಶಿವಯೋಗಿ ನಾಗನಹಳ್ಳಿ, ಉಮೇಶ ಪಾಟೀಲ, ರವಿರಾಜ ಕೊರವಿ, ಮಲ್ಲಿನಾಥ ಜಿನಕೇರಿ ಅವರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News