ಶ್ರೀಮತಿ ವೀರಮ್ಮ ಗಂಗಸೀರಿ ಮಹಿಳಾ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ
ಕಲಬುರಗಿ: ಕನ್ನಡಿಗರು ಅತ್ಯಂತ ಉದಾರಿಗಳು, ಆದರೆ ಸ್ವಾಭಿಮಾನಿ ಶೂನ್ಯರಾಗಿದ್ದಾರೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ ಸಿ ಸಿ ಪಾಟೀಲ್ ಹೇಳಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸೀರಿ ಮಹಿಳಾ ಮಹಾವಿದ್ಯಾಲಯದಲ್ಲಿ ನಡೆದ ಸಂಸ್ಥೆಯ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.
ಭಾರತದ ಬೇರೆ ಬೇರೆ ರಾಜ್ಯದ ಜನರಲ್ಲಿರುವ ಮಾತೃಭಾಷೆಯ ಅಭಿಮಾನ ನಮ್ಮ ರಾಜ್ಯದ ಜನತೆಯಲ್ಲಿ ಸ್ವಲ್ಪ ಕಡಿಮೆಯೇ ಇದೆ. ನಾವು ಬೇರೆ ರಾಜ್ಯದ ಭೇಟಿ ನೀಡಿದಾಗ ಅಲ್ಲಿಯ ಜನ ನಮ್ಮೊಂದಿಗೆ ಅವರ ಮಾತೃಭಾಷೆಯಲ್ಲಿ ಮಾತನಾಡುತ್ತಾರೆ. ಆಗ ನಾವು ಸಾಧ್ಯವಾದಷ್ಟು ಅವರ ಭಾಷೆಯನ್ನು ಮಾತನಾಡಲು ಪ್ರಯತ್ನ ಮಾಡುತ್ತೇವೆ. ಆದರೆ ಅವರು ನಮ್ಮ ರಾಜ್ಯಕ್ಕೆ ಭೇಟಿ ನೀಡಿದಾಗ ನಾವು ಕನ್ನಡ ಭಾಷೆಯಲ್ಲಿ ಮಾತನಾಡದೆ ಅವರ ಭಾಷೆಯಲ್ಲಿ ಮಾತನಾಡುತ್ತೇವೆ ಯಾಕೆಂದರೆ ನಾವು ಉದಾರಿಗಳು. ನಮ್ಮ ಮಾತೃಭಾಷೆಯನ್ನು ಅವರಿಗೆ ಕಲಿಸಲು ಪ್ರಯತ್ನ ಮಾಡುವುದಿಲ್ಲ ಎಂದು ಹೇಳಿದರು.
ಇಂದು ನಮ್ಮ ರಾಜ್ಯದಲ್ಲಿ ಜಾಗತೀಕರಣದ ಹಿನ್ನೆಲೆಯಲ್ಲಿ ಹಿಂದಿ, ಇಂಗ್ಲಿಷ ಭಾಷೆಯನ್ನು ನಾವು ಬಾಲ್ಯದಿಂದಲೇ ಮಕ್ಕಳಿಗೆ ಕಲಿಸುತ್ತೇವೆ. ಆದರೆ ಹಿಂದಿ ಭಾಷೆಯ ರಾಜ್ಯಗಳು ಸಹ ಬೇರೆ ಬೇರೆ ರಾಜ್ಯದ ಭಾಷಾ ಶಿಕ್ಷಣವನ್ನು ತಮ್ಮ ರಾಜ್ಯಗಳಲ್ಲಿ ಅಳವಡಿಸಿಕೊಳ್ಳುವದು ಅವಶ್ಯಕತೆ ಇದೆ. ಹೀಗಾದಾಗ ದೇಶದಲ್ಲಿ ಭಾಷಾ ತಾರತಮ್ಯ ಏರ್ಪಾಡುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರಾಜೇಂದ್ರ ಕೊಂಡಾ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ ಮೋಹನರಾಜ ಪತ್ತಾರ, ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಎಸ್ .ಆರ್. ಪಾಟೀಲ್, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಎಸ್.ಎಸ್.ಗಲಗಲಿ, ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಎನ್ ಜಿ ಪಾಟೀಲ್, ಸಂಸ್ಥೆಯ ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಡಾ ಅಮರೇಶ ಪಾಟೀಲ್ ಉಪಸ್ಥಿತರಿದ್ದರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ನೋಡಲ್ ಅಧಿಕಾರಿ ಡಾ. ಮಹೇಶ್ ಕುಮಾರ್ ಗಂವ್ಹಾರ ಕಾರ್ಯಕ್ರಮ ನಿರೂಪಿಸಿದರು. ಡಾ ಮೋಹನರಾಜ ಪತ್ತಾರ ವಂದಿಸಿದರು.