ಕರ್ನಾಟಕ ಸುವರ್ಣ ಸಂಭ್ರಮ-50 : ಹಲ್ಮಿಡಿ ಶಾಸನ ಪ್ರತಿಕೃತಿ ಅನಾವರಣಗೊಳಿಸಿದ ಸಚಿವ ಪ್ರಿಯಾಂಕ್ ಖರ್ಗೆ

Update: 2024-11-01 08:35 GMT

ಕಲಬುರಗಿ: ಮೈಸೂರು ರಾಜ್ಯವನ್ನು 1973ರಲ್ಲಿ ವಿಶಾಲಾರ್ಥದಲ್ಲಿ ಕರ್ನಾಟಕ ಎಂದು ನಾಮಕರಣಗೊಂಡು ಇದೀಗ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ 'ಕರ್ನಾಟಕ ಸುವರ್ಣ ಸಂಭ್ರಮ-50'ರ ಸವಿನೆನಪಿಗಾಗಿ ಶುಕ್ರವಾರ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರ ಅವರಣದಲ್ಲಿ ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಅನಾವರಣಗೊಳಿಸಿದರು.

ಹಲ್ಮಿಡಿ ಶಾಸನ ಕನ್ನಡ ಲಿಪಿಯಲ್ಲಿ ರಚಿಸಲ್ಪಟ್ಟಿರುವ ಮೊಟ್ಟ ಮೊದಲ ಶಾಸನವಾಗಿದೆ. ಇದು ಹಾಸನ ಜಿಲ್ಲೆಯ ಬಳಿಯಲ್ಲಿರುವ ಹಲ್ಮಿಡಿ ಎಂಬ ಸ್ಥಳದಲ್ಲಿ 1936 ರಲ್ಲಿ ಡಾ. ಎಂ. ಎಚ್. ಕೃಷ್ಣ ಎಂಬುವವರಿಂದ ಸಂಶೋಧಿಸಲ್ಪಟ್ಟಿತು. ಇದು ಹದಿನಾರು ಸಾಲುಗಳನ್ನು ಹೊಂದಿದ್ದು, ಮರಳ ಶಿಲ್ಪದ ಮೇಲೆ ಕೆತ್ತಲ್ಪಟ್ಟಿದೆ. ಇದು ಹಳಗನ್ನಡ ಹಾಗೂ ದಾಕ್ಷಾಣಾತ್ಯ ಬ್ರಾಹ್ಮಿ ಲಿಪಿಗಳನ್ನು ಹೋಲುವಂತಹ ಕನ್ನಡ ಲಿಪಿಯಲ್ಲಿದೆ.

ಕದಂಬ ವಂಶದ ಕಾಕುಸ್ಥವರ್ಮ ಬರೆಸಿದ ದತ್ತಿಶಾಸನ ಇದಾಗಿದೆ. ಶತೃರಾಜರ ಮೇಲೆ ಹೋರಾಡಿ ಗೆದ್ದ ವಿಜ ರಸ ಎಂಬ ಯೋಧನಿಗೆ, ಪಲ್ಮಿಡಿ ಮತ್ತು ಮೂಳಿವಳ್ಳಿಯನ್ನು ದತ್ತಿಯಾಗಿ ಬಿಟ್ಟ ರಾಜಾಜ್ಞೆಯನ್ನು ಈ ಶಾಸನ ನಿರೂಪಿಸುತ್ತದೆ. ಹಲ್ಮಿಡಿ ಶಾಸನ ಸಂಸ್ಕೃತ ಪ್ರಭಾವಕ್ಕೆ ಒಳಗಾಗಿದ್ದರೂ, ಆ ಕಾಲದಲ್ಲಿ ಬಳಕೆಯಲ್ಲಿದ್ದ ಪ್ರೌಢ ಕನ್ನಡವನ್ನು ನಿರೂಪಿಸುತ್ತದೆ.

ಈ ಸಂದರ್ಭದಲ್ಲಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕಲಬುರಗಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಅಪರ ಜಿಲ್ಲಾದಿಕಾರಿ ರಾಯಪ್ಪ ಹುಣಸಗಿ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News