ಕೇಂದ್ರ ಸಚಿವ ಜೋಶಿ ಅವರದ್ದು ಬರೀ ಬೆಂಕಿ ಹಚ್ಚುವ ಕೆಲಸ: ಪ್ರಿಯಾಂಕ್ ಖರ್ಗೆ
ಕಲಬುರಗಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ದೀಪ ಹಚ್ಚುವ ಕೆಲಸ ಈವರೆಗೆ ನೋಡೇ ಇಲ್ಲ, ಅವರೇನಿದ್ದರೂ ಬೆಂಕಿ ಹಚ್ಚುವ ಕೆಲಸ ಮಾಡ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಶಕಗಳೇ ಕಳೆದರೂ ಕೇಂದ್ರ ಸರಕಾರದಿಂದ ಒಂದು ಯೋಜನೆ ಅಂತ ಕರ್ನಾಟಕಕ್ಕೆ ಕೊಟ್ಟಿದ್ದಾರಾ? ನಿರ್ಮಲಾ ಸೀತಾರಾಮನ್ ರಾಜ್ಯದಿಂದ ಎರಡನೇ ಬಾರಿಗೆ ಆಯ್ಕೆಯಾಗಿ ಹೋಗಿದ್ದಾರೆ. ತೆರಿಗೆಯಲ್ಲಿ ನಮಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿದ್ದಾರಾ? ಎಂದು ಪ್ರಶ್ನಿಸಿದರು.
ಉಪಚುನಾವಣೆ ಮುಗಿದ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾಗುತ್ತದೆ ಎಂದು ಅವರ ಪಕ್ಷದವರೇ ಹೇಳುತ್ತಿದ್ದಾರೆ. ಅಲ್ಲದೆ ನಮ್ಮ ಪಕ್ಷಕ್ಕೆ ಬರಲು 8 ಕ್ಕೊ ಹೆಚ್ಚು ನಾಯಕರು ಸಂಪರ್ಕದಲ್ಲಿದ್ದಾರೆ ಸುಳಿವು ನೀಡಿದರು.
ಇನ್ನು ಶಕ್ತಿ ಯೋಜನೆಯ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ಯಾವುದೇ ಕಾರಣಕ್ಕೂ ಶಕ್ತಿ ಯೋಜನೆ ಸೇರಿದಂತೆ ಉಳಿದ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ತಿಳಿಸಿದ್ದಾರೆಂದು ಸ್ಪಷ್ಟಪಡಿಸಿದರು.
ಚನ್ನಪಟ್ಟಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿರುವ ಸಿಪಿ ಯೋಗೇಶ್ವರ್ ಅವರು ಗೆಲ್ಲುವುದು ಖಚಿತ. ಈಗಾಗಲೇ ಅವರು ನೀರಾವರಿ ಕುರಿತಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಜನ ಅವರನ್ನು ಆರಿಸಿ ತರಲಿದ್ದಾರೆ. ಮೂರೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಶತಸಿದ್ಧ ಎಂದರು.