ಕಲಬುರಗಿ | ಕಾರಾಗೃಹದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ : ಅಧಿಕಾರಿ-ಸಿಬ್ಬಂದಿಯಿಂದ ರಕ್ತದಾನ
ಕಲಬುರಗಿ : ಕರ್ನಾಟಕ ರಾಜ್ಯೋತ್ಸವದ ದಿನಾಚರಣೆ ಹಿನ್ನೆಲೆಯಲ್ಲಿ ಶುಕ್ರವಾರ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಕರ್ನಾಟಕ ಸುವರ್ಣ ಸಂಭ್ರಮ-50ರ ಕಾರ್ಯಕ್ರವನ್ನು ಆಚರಿಸಲಾಯಿತು.
ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ.ಅನಿತಾ ಆರ್., ರಕ್ತದಾನ ಮಹಾದಾನವಾಗಿದೆ. ಪ್ರತಿಯೊಬ್ಬರು ರಕ್ತದಾನ ಮಾಡಬೇಕು. ಈ ಕುರಿತು ಇತರರಿಗೂ ಅರಿವು ನೀಡುವ ಮೂಲಕ ರಕ್ತದಾನ ಮಾಡಲು ಪ್ರೋತ್ಸಾಹಿಸಬೇಕೆಂದು ಕರೆ ನೀಡಿದರು.
ಕಾರಾಗೃಹದ ಅಧಿಕಾರಿ - ಸಿಬ್ಬಂದಿಗಳು ಹಾಗೂ ಕೆ.ಎಸ್.ಐ.ಎಸ್.ಎಫ್. ಸಿಬ್ಬಂದಿಗಳು ರಕ್ತದಾನ ಮಾಡಿದರು. ಜಿಮ್ಸ್ ಆಸ್ಪತ್ರೆ ರಕ್ತದಾನ ನಿಧಿ ಸಂಸ್ಥೆಯ ಡಾ. ಮಮತಾ ವಿ. ಪಾಟೀಲ ಮತ್ತು ತಂಡ ಶಿಬಿರ ಆಯೋಜಿಸಿ ದಾನಿಗಳಿಂದ ರಕ್ತ ಸಂಗ್ರಹಿಸಿದರು.
ಇದಕ್ಕೂ ಮುನ್ನ 69ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಡಾ.ಅನಿತಾ ಆರ್. ಅವರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ್ ಡಾಂಗೆ, ಸಹಾಯಕ ಅಧೀಕ್ಷಕ ಚನ್ನಪ್ಪ, ಡಾ. ಆರ್ಚನಾ, ಡಾ. ಆನಂದ ಅಡಕಿ, ಕಚೇರಿ ಅಧೀಕ್ಷಕ ಗುರುಶೇಶ್ವರ ಶಾಸ್ತ್ರಿ, ಜೈಲರ್‌ಗಳಾದ ಸುನಂದ ವಿ., ಸಾಗರ ಪಾಟೀಲ್ ಸೇರಿದಂತೆ ಎಲ್ಲಾ ಸಹಾಯಕ ಜೈಲರ್ ವೃಂದದವರು, ಕಾರಾಗೃಹದ ಲಿಪಿಕ ಮತ್ತು ಕಾರ್ಯನಿರ್ವಾಹಕ ಅಧಿಕಾರಿ-ಸಿಬ್ಬಂದಿಗಳು ಉಪಸ್ಥಿತರಿದ್ದರು.