ಕಲಬುರಗಿ | ಯುವ ಬರಹಗಾರರಿಂದ ಸ್ಮರಣ ಸಂಚಿಕೆ ಹೊರತರಲಾಗುತ್ತಿರುವುದು ಹೆಮ್ಮೆಯ ಸಂಗತಿ: ಡಾ.ಲಲಿತಾ ನಾಯಕ
ಕಲಬುರಗಿ : ಶಹಾಬಾದ್ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವಂತೆ ಹಿರಿಯ ಸಾಹಿತಿ ಡಾ.ಬಿ.ಟಿ.ಲಲಿತಾ ನಾಯಕ ಅವರಿಗೆ ಕಸಾಪ ಮಾಜಿ ತಾಲೂಕಾಧ್ಯಕ್ಷ ಮೃತ್ಯುಂಜಯ್ ಹಿರೇಮಠ ಆಮಂತ್ರಣ ಪತ್ರಕೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮೃತ್ಯುಂಜಯ್ ಹಿರೇಮಠ ಅವರು ಸಮ್ಮೇಳನದ ಕುರಿತು ಹಾಗೂ ಹೊರತರಲಾಗುತ್ತಿರುವ ಸ್ಮರಣ ಸಂಚಿಕೆಯ ಬಗ್ಗೆ ತಿಳಿಸಿದರು. ನಂತರ ಮಾತನಾಡಿದ ಸಾಹಿತಿ ಡಾ.ಬಿ.ಟಿ.ಲಲಿತಾ ನಾಯಕ ಅವರು, ಸ್ಥಳೀಯ ಯುವ ಕವಿ, ಲೇಖಕ, ಬರಹಗಾರರಿಂದ ಸ್ಮರಣ ಸಂಚಿಕೆ ಹೊರತರಲಾಗುತ್ತಿರುವುದು ಹೆಮ್ಮೆಯ ಸಂಗತಿ.
ಒಂದು ತಾಲೂಕಿಗೆ ಸಂಬಂಧಿತ ಸಮ್ಮೇಳನವು ಅಲ್ಲಿಯ ಭಾಷೆ, ಸಂಸ್ಕೃತಿ, ಕಲೆ, ಕಾವ್ಯ, ಸಾಹಿತ್ಯ, ಚರಿತ್ರೆ, ಇತಿಹಾಸ ಇತ್ಯಾದಿಗಳಿಗೆ ಸಾಕ್ಷಿಯಾಗುತ್ತದೆ. ಅದೆಲ್ಲವನ್ನು ಸಂಶೋಧನಾತ್ಮಕವಾಗಿ, ಪ್ರಾಮಾಣಿಕವಾಗಿ ಕ್ರೋಢೀಕರಿಸಿ ಬರಹ ರೂಪದಲ್ಲಿ ಪ್ರಕಟಿಸಿ ಸಾರ್ವಜನಿಕರಿಗೆ ತಲುಪಿಸುವುದು ಪರಿಷತ್ತಿನ ಜವಾಬ್ದಾರಿ ಆಗಿರುತ್ತದೆ.
ಅಂತಹ ಒಂದು ಉತ್ತಮವಾದ ಕಾರ್ಯದಲ್ಲಿ ತೊಡಗಿ ಸಮ್ಮೇಳನಕ್ಕೆ ನ್ಯಾಯ ಒದಗಿಸುತ್ತಿರುವ ತಾಲ್ಲೂಕು ಪರಿಷತ್ತಿನ ಗೌರವಾನ್ವಿತ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.