ಕಲಬುರಗಿ | ಸಿ.ಟಿ.ರವಿ ಅಸಹ್ಯವಾಗಿ ಮಾತನಾಡಿದ್ದು ನಿಜ : ಬಿ.ಆರ್.ಪಾಟೀಲ್

Update: 2024-12-25 11:03 GMT

ಕಲಬುರಗಿ : 'ಬಿಜೆಪಿಯ ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಅವರು ಸದನದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕುರಿತಾಗಿ ಅಸಹ್ಯವಾಗಿ ಮಾತನಾಡಿರುವುದು ನಿಜ, ಯಾವುದೇ ರಾಜಕಾರಣಿಗೆ ಸಲ್ಲದಂತಹ ಮಾತಾಡಿದ್ದಾರೆ, ಆ ಮಾತು ಹೇಳಬಾರದಿತ್ತು' ಎಂದು ಮುಖ್ಯಮಂತ್ರಿಯ ಸಲಹೆಗಾರ, ಆಳಂದ ಶಾಸಕ ಬಿ.ಆರ್.ಪಾಟೀಲ್ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ ಅವರು ಬಳಸಿದ ಪದವನ್ನು ಕೇಳಿದ ಬಿಜೆಪಿಯ ಕೆಲ ಶಾಸಕರು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಳಿ ಹೋಗಿ ಕ್ಷಮೆ ಕೋರಿದ್ದಾರೆ, ಆ ಶಾಸಕರು ಸಿ.ಟಿ.ರವಿ ಪರ ನಾವೇ ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ, ಕ್ಷಮೆಯಾಚಿಸಿದ ಶಾಸಕರ ಹೆಸರು ಹೇಳಲು ಇಚ್ಛೆ ಪಡಲ್ಲ ಎಂದು ತಿಳಿಸಿದರು.

ಗದಗ ಗ್ರಾಮೀಣ ವಿವಿಗೆ ಮಹಾತ್ಮ ಗಾಂಧೀಜಿ ಹೆಸರಿಡಿ :

ಗದಗದಲ್ಲಿರುವ ಗ್ರಾಮೀಣ ಅಭಿವೃದ್ಧಿ ವಿಶ್ವವಿದ್ಯಾಲಯಕ್ಕೆ ಮಹಾತ್ಮ ಗಾಂಧೀಜಿ ಗ್ರಾಮೀಣ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಬೇಕೆಂದು ಮುಖ್ಯಮಂತ್ರಿಗಳ ಸಲಹೆಗಾರ, ಆಳಂದ ಶಾಸಕ ಬಿ.ಆರ್.ಪಾಟೀಲ್ ಅವರು ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಯವರು 1924ರಲ್ಲಿ ಅಧ್ಯಕ್ಷತೆ ವಹಿಸಿದ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ನಾಳೆಗೆ ನೂರು ವರ್ಷ ತುಂಬಲಿದೆ, ಈ ನಿಟ್ಟಿನಲ್ಲಿ ಸತ್ಯಾಗ್ರಹದ ನೆನಪಿಗಾಗಿ ಬೆಳಗಾವಿಯಲ್ಲಿ ಗಾಂಧೀಜಿಯವರ ಪುತ್ತಳಿ ಅನಾವರಣಗೊಳ್ಳಲಿದೆ. ಅದೇ ರೀತಿಯಲ್ಲಿ ಗ್ರಾಮೀಣ ಅಭಿವೃದ್ಧಿಗಾಗಿ ಗಾಂಧೀಜಿಯವರು ದೊಡ್ಡ ಕನಸುಗಳನ್ನು ಇಟ್ಟುಕೊಂಡಿದ್ದರು. ಹಾಗಾಗಿ ಆ ವಿಷಯದಲ್ಲಿ ಅವರ ಹೆಸರು ಇಡುವುದರಿಂದ ಮಾದರಿ ವಿವಿಯನ್ನಾಗಿ ಹೊರಹೊಮ್ಮಲಿದೆ ಎಂದರು.

ಪಂಚಮಸಾಲಿ ಸಮುದಾಯದ ಹೋರಾಟದ ಕುರಿತಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಪಂಚಮಸಾಲಿ ಸಮುದಾಯದ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವುದಕ್ಕೆ ಯಾವುದೇ ವಿರೋಧ ಇಲ್ಲ, ಕಾನೂನಿನಲ್ಲಿ ಅವಕಾಶ ಇದ್ದರೆ ಮಾತ್ರ ಮೀಸಲಾತಿ ನೀಡಲು ಸಾಧ್ಯವಿದೆ, ಈಗ ಹಲವಾರು ಸಮುದಾಯಗಳು ಮೀಸಲಾತಿ ಬೇಕೆಂದು ಸರ್ಕಾರದ ಮುಂದೆ ಬೇಡಿಕೆ ಇಡುತ್ತಿವೆ. ಕಾನೂನಿನ ಪ್ರಕಾರ ಹೋರಾಟಕ್ಕೆ ಸಿದ್ದವಿದ್ದರೆ ನಾನು ಬೆಂಬಲಿಸುವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಜಶೇಖರ್ ಯಂಕಂಚಿ, ಬಾಬುರಾವ್ ಗೊಬ್ಬುರ್ ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News