ಕಲಬುರಗಿ | ಒತ್ತಡದ ಜೀವನದಲ್ಲಿ ರಂಗ ಕಲೆ, ಸಾಹಿತ್ಯವು ನಮ್ಮ ಸಾಂಸ್ಕೃತಿಕ ಬದುಕಿನ ಅಸ್ಮಿತೆ : ನಾಗಪ್ಪಯ್ಯ ಮಹಾಸ್ವಾಮಿ

ಕಲಬುರಗಿ: ಒತ್ತಡದ ಜೀವನದ ತಲ್ಲಣಗಳಲ್ಲಿ ರಂಗ ಕಲೆ ಮತ್ತು ರಂಗ ಸಾಹಿತ್ಯ ನಮ್ಮ ಸಾಂಸ್ಕೃತಿಕ ಬದುಕಿನ ಅಸ್ಮಿತೆಯಾಗಿವೆ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಗದ್ದುಗೆ ಮಠದ ಮಹಾತ್ಮಾ ಪೀಠದ ಹಾಗೂ ನಾ.ನಾ.ಸಂ. ಮುಖ್ಯಸ್ಥ ನಾಗಪ್ಪಯ್ಯ ಮಹಾಸ್ವಾಮಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇದೇ ಮೊದಲ ಬಾರಿಗೆ ನಗರದ ಕನ್ನಡ ಭವನದ ಬಾಪುಗೌಡ ದರ್ಶನಾಪೂರ ರಂಗಮಂದಿರದಲ್ಲಿ ಲಿಂ.ಕೋಡ್ಲಿ ಕಂಟೆಪ್ಪ ಮಾಸ್ತರ್ ವೇದಿಕೆಯಡಿಯಲ್ಲಿ ಗುರುವಾರ ಆಯೋಜಿಸಿದ ಜಿಲ್ಲಾ ಪ್ರಥಮ ರಂಗ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಸ್ಥಾನ ಅಲಂಕರಿಸಿ ಮಾತನಾಡಿದ ಅವರು, ಜೀವನ ಯಾಂತ್ರಿಕವಾಗಿದ್ದು, ರಂಗಭೂಮಿಯ ಕಲೆ ಮತ್ತು ಪರಂಪರೆಗಳು ಮರೀಚಿಕೆಯಾಗುತ್ತಿವೆ. ಹೀಗಾಗಿ ರಂಗ ಕಲೆಗಳು ನಶಿಸಿ ಹೋಗುತ್ತಿವೆ ಮತ್ತು ಬಣ್ಣದ ಬದುಕಿನ ಧ್ವನಿಗಳು ಕ್ಷೀಣಿಸುತ್ತವೆ. ಮೊಬೈಲ್ ಸಂಸ್ಕೃತಿಯಿಂದ ನಾಟಕ ಕ್ಷೇತ್ರ ಬದಲಾಗಿದೆ. ಇಂದು ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಗಳ ಬಣ್ಣದ ಬದುಕು ದೂರವಅಗಿ, ಜೀವನ ಸತ್ಯ ಇಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಭಾಗದ ರಂಗಭೂಮಿಯ ಕಲಾವಿದರು ಎಲೆ ಮರೆಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂದು ಕಲೆಗಳನ್ನು ಉಳಿಸಿ ಬೆಳೆಸುತ್ತಿರುವ ಕಲಾವಿದರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕು ಮತ್ತು ಅವರಿಗೆ ಮಾಶಾಸನ ಹೆಚ್ಚಿಸಬೇಕು ಎಂದು ಅವರು ಸರಕಾರಕ್ಕೆ ಶ್ರೀ ನಾಗಪ್ಪಯ್ಯ ಮಹಾಸ್ವಾಮಿಗಳು ಒತ್ತಾಯಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ರಂಗಕರ್ಮಿಗಳು ಅಭಿನಯಿಸುವ ನಾಟಕಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದರ ಜತೆಗೆ ಸಮಾಜಕ್ಕೆ ಪರಿವರ್ತನೆಯ ಸಂದೇಶವನ್ನು ರವಾನಿಸುವ ಕಾರ್ಯ ಮಾಡುತ್ತಿರುತ್ತಾರೆ. ಇಂದಿನ ಹೊಸ ಪೀಳಿಗೆಗೆ ನಾಟಕಗಳ ರಚನೆ ಹಾಗೂ ಅಭಿರುಚಿಯನ್ನು ಬೆಳೆಸುವ ಅಗತ್ಯವಿದೆ. ರಂಗಭೂಮಿಗೆ ತನ್ನದೇ ಆದ ವೈಶಿಷ್ಟ್ಯವಿದ್ದು, ಕಲೆಯ ಉಳಿವು ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುವುದು ಅಗತ್ಯವಿದೆ ಎಂದರು.
ಯಾದಗಿರಿ ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಸಮ್ಮೇಳನ ಉದ್ಘಾಟಿಸಿದರು. ಸ್ವಾಗತ ಸಮಿತಿ ಗೌರವಾಧ್ಯಕ್ಷ ರಾಜುಗೌಡ ನಾಗನಹಳ್ಳಿ, ಅಧ್ಯಕ್ಷ ಗಿರಿರಾಜ ಯಳಮೇಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಪ್ರಾಧ್ಯಾಪಕಿ ಡಾ.ಮೈತ್ರಾದೇವಿ ಹಳೆಮನಿ, ಯುವ ಮುಖಂಡ ರಾಮಚಂದ್ರ ರೆಡ್ಡಿ ಗುಮ್ಮಟ ಮಾತನಾಡಿದರು. ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಶರಣರಾಜ್ ಛಪ್ಪರಬಂದಿ, ಸಿದ್ಧಲಿಂಗ ಬಾಳಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಧರ್ಮರಾಜ ಜವಳಿ, ಶಕುಂತಲಾ ಪಾಟೀಲ, ಜ್ಯೊತಿ ಕೋಟನೂರ, ದೇವೇಂದ್ರ ದೇಸಾಯಿ ಕಲ್ಲೂರ, ಬಾಬುರಾವ ಪಾಟೀಲ, ಕಲ್ಯಾಣಕುಮಾರ ಶೀಲವಂತ ವೇದಿಕೆ ಮೇಲಿದ್ದರು.
ಸಮ್ಮೇಳನಾಧ್ಯಕ್ಷರ ಅದ್ಧೂರಿ ಸಾಂಸ್ಕೃತಿಕ ಮೆರವಣಿಗೆ :
ನಾಟಕಕಾರ, ರಂಗ ಕಲಾವಿದರು ಆಗಿರುವ ಜಿಲ್ಲಾ ಪ್ರಥಮ ರಂಗ ಸಾಹಿತ್ಯ ಅಸಮ್ಮೇಳನ ಸರ್ವಾಧ್ಯಕ್ಷರಾದ ನಾನಾಸಂ ನ ಮುಖ್ಯಸ್ಥರಾದ ನಾಗಪ್ಪಯ್ಯ ಮಹಾಸ್ವಾಮಿಗಳನ್ನು ಹೊತ್ತ ಸಾರೋಟದಲ್ಲಿ ನಡೆದ ಮೆರವಣಿಗೆ ಸರದಾರ ವಲ್ಲಭಬಾಯಿ ಪಟೇಲ್ ವೃತ್ತದಿಂದ ಕನ್ನಡ ಭವನದ ಪ್ರಾಂಗಣದವರೆಗೆ ಅದ್ಧೂರಿ ಮೆರವಣಿಗೆ ನಡೆಯಿತು.
ಡೊಳ್ಳು ಕುಣಿತ, ಹಲಗೆ ನೃತ್ಯ ಹಾಗೂ ವಿವಿದ ಜನಪದ ಕಲಾ ತಂಡಗಳು ಪಾಲ್ಗೊಂಡಿದ್ದವು. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗೂ ಅವರ ಪದಾಧಿಕಾರಿಗಳ ನೃತ್ಯ ಪ್ರೇಕ್ಷಕರ ವಿಶೇಷ ಗಮನ ಸೆಳೆಯಿತು.ಸಾಹಿತಿಗಳು, ಕಲಾವಿದರು, ಮಕ್ಕಳು ಭಾಗವಹಿಸಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿದರು. ಬಣ್ಣದ ವೇಷ ಧರಿಸಿದ ಕಲಾವಿದರು ವಿಶೇಷ ಗಮನ ಸೆಳೆದರು. ಮೆರವಣಿಗೆಗೆ ಹಿರಿಯ ನಾಟಕಕಾರ ರಮಾನಂದ ಹಿರೇಜೇವರ್ಗಿ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು. ಅಶೋಕ ಸೊನ್ನ, ನರಸಿಂಗರಾವ ಹೇಮನೂರ ಉಪಸ್ಥಿತರಿದ್ದರು.
ಗಮನ ಸೆಳೆದ ರಂಗಾಂತರಾಳ ಗೋಷ್ಠಿ :
ರಂಗಭೂಮಿ ಮತ್ತು ಸಮಕಾಲೀನ ತಲ್ಲಣಗಳು ಕುರಿತು ಮಾತನಾಡಿದ ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ, ರಂಗಭೂಮಿ ಕ್ಷೇತ್ರ ನಮ್ಮ ಜೀವನದ ತಲ್ಲಣಗಳಿಗೆ ಪರಿಹಾರ ಹುಡುಕುವಂತದು. ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗಬೇಕಾದರೆ ವೃತ್ತಿ ರಂಗಭೂಮಿ ಪ್ರಮುಖ ಪಾತ್ರ ವಹಿಸುತ್ತವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳೆದ ನಾಲ್ಕು ದಶಕಗಳಿಂದ ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳು ಪ್ರದರ್ಶನಗೊಂಡಿವೆ. ರಂಗಭೂಮಿಗೆ ಈ ಭಾಗದ ಕಲಾವಿದರು ಪ್ರಮುಖ ಕೊಡುಗೆ ನೀಡಿದ್ದಾರೆ. ನಾಟ್ಯ ಸಂಘಗಳು ಕಟ್ಟಿಕೊಂಡು ರಂಗಭೂಮಿ ಉಳಿಸಿ ಬೆಳೆಸಿದ್ದಾರೆ. ಕಲಾವಿದರಿಗೆ ಸೂಕ್ತ ವೇದಿಕೆಯ ಅವಕಾಶ ಮಾಡಿಕೊಡಬೇಕು. ನಾಟಕ ನೋಡುವ ಆಸಕ್ತಿ ಬೆಳೆಸಬೇಕಾಗಿದೆ ಎಂದರು.
ಸಮ್ಮೇಳನಾಧ್ಯಕ್ಷರ ಬದುಕು-ಸಾಧನೆ ಕುರಿತು ಮಾತನಾಡಿದ ಪತ್ರಕರ್ತ-ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು ಅವರು, ಕಲ್ಯಾಣ ಕರ್ನಾಟಕ ನೆಲದಲ್ಲಿ ಅಳ್ಳೋಳ್ಳಿಯ ಮಹಾತ್ಮಾ ಪೀಠವು ಸರ್ವಧರ್ಮ ಸಮನ್ವಯ ಪೀಠವೆನಿಸಿದೆ. ಧರ್ಮಾತೀತ ಮತ್ತು ಜಾತ್ಯತೀತವಾಗಿ ರಂಗಕ್ಷೇತ್ರದಲ್ಲಿ ನಮ್ಮ ಅಳ್ಳೊಳ್ಳಿಯ ಗದ್ದುಗೆ ಮಠವು ಧಾರ್ಮಿಕ ಕಾರ್ಯಗಳ ಜತೆಗೆ, ಸಾಹಿತ್ಯ, ಸಂಗೀತ, ರಂಗಭೂಮಿ ಮೂಲಕ ಸಾಮಾಜಿಕ ಪರಿವರ್ತನೆಯಲ್ಲಿ ತೊಡಗಿಸಿಕೊಂಡಿದ್ದು, ಇತಿಹಾಸವೇ ಸರಿ. ವೃತ್ತಿರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿ ಯನ್ನು ಒಳಗೊಂಡ ಗ್ರಾಮೀಣ ರಂಗಭೂಮಿಯನ್ನು ನಿರಂತರ ಜೀವಂತವಾಗಿಟ್ಟಿದ್ದು ಅಳ್ಳೋಳಿಯ ನಾನಾಸಂ ಸಂಸ್ಥೆಯ ಮುಖ್ಯ ಶ್ರೀ ನಾಗಪ್ಪಯ್ಯ ಮಹಾಸ್ವಾಮಿಗಳು ಎಂದು ಹೇಳಿದರು.
ಗ್ರಾಮೀಣ ರಂಗಭೂಮಿಯ ಸವಾಲುಗಳು ವಿಷಯವಾಗಿ ನಾಟಕಕಾರ ಶಿವಣ್ಣ ಹಿಟ್ಟಿನ ಮಾತನಾಡಿದರು. ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಸೂರ್ಯಕಾಂತ ಜಮಾದಾರ ದಿಕ್ಸೂಚಿ ನುಡಿಗಳನ್ನಾಡಿದರು. ಹಣಮಂತಪ್ರಭು, ಶಂಕರಜೀ ಹೂವಿನ ಹಿಪ್ಪರಗಿ, ಶಿವರಾಜ ಇಂಗಿನಶೆಟ್ಟಿ ವೇದಿಕೆ ಮೇಲಿದ್ದರು.
ಸಮಾರೋಪ ನುಡಿಗಳನ್ನಾಡಿದ ರಂಗ ಸಮಾಜದ ಮಾಜಿ ಸದಸ್ಯ ಶ್ರೀಧರ ಹೆಗಡೆ ಅವರು, ಜೀವನದ ಪ್ರತಿಬಿಂಬವೇ ನಾಟಕ ಕ್ಷೇತ್ರವಾಗಿದೆ. ಬಂದು ಹೋಗುವ ಸನ್ನಿವೇಶಗಳನ್ನು ರಂಗ ಕಲೆಯ ಮೂಲಕ ಪ್ರದರ್ಶಿಸಿದಾಗ ಅವರ ಜೀವಂತಿಕೆ ಹೆಚ್ಚಿಸಬಹುದಾಗಿದೆ ಮತ್ತು ರಂಗ ಕಲೆಯ ಹೆಜ್ಜೆ ಗುರುತುಗಳು ಜಿಲ್ಲೆಯಲ್ಲಿ ಕಳೆದ ಒಂದು ಶತಮಾನದಿಂದಲೂ ಕಾಣಬಹುದಾಗಿದೆ. ರಂಗ ನಾಟಕಗಳು ಸಾಹಿತ್ಯವೇ ಅಲ್ಲವೆಂಬ ಕಾಲದಲ್ಲಿ ರಂಗ ಸಾಹಿತ್ಯ ಇದೆ ಎಂಬುದನ್ನು ತೋರಿಸಿಕೊಟ್ಟ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಲ್ಲುತ್ತದೆ ಎಂದು ಹೇಳಿದರು.
ಬಿ.ಸಂದೀಪ, ಕುಪೇಂದ್ರ ಬರಗಾಲಿ, ದೇವೀಂದ್ರ ದೇಸಾಯಿ ಕಲ್ಲೂರ, ಸಿದ್ಧಲಿಂಗಯ್ಯ ಸ್ವಾಮಿ ಮಲಕೂಡ, ಎಸ್.ಎನ್. ದಂಡಿನಕುಮಾರ, ಪ್ರಭುಲಿಂಗ ಮೂಲಗೆ ಮಾತನಾಡಿದರು. ರಂಗ ಕ್ಷೇತ್ರದ ಜಿಲ್ಲೆಯ ಅನೇಕ ದಿಗ್ಗಜರನ್ನು ಸತ್ಕರಿಸಲಾಯಿತು. ರಂಗಭೂಮಿ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿರುವ ಲಿಂಗೈಕ್ಯರಾದ ಎಲ್.ಬಿ.ಕೆ ಆಲ್ದಾಳ ಕವಿಗಳು, ರಾಚನ್ಣ ಕರದಾಳ ಕಮರವಾಡಿ, ಭೀಮರಾವ ತಿಳಗೂಳ ಅವರ ಹೆಸರಿನ ಮಹಾದ್ವಾರಗಳು ನಿರ್ಮಿಸಲಾಯಿತು.
ಸಮ್ಮೇಳನದ ನಿರ್ಣಯಗಳು :
1. ಹಿರಿಯ ರಂಗ ಕಲಾವಿದರಿಗೆ ಈಗ ನೀಡುತ್ತಿರುವುಕ್ಕಿಂತ ಹೆಚ್ಚಿನ ಮಾಶಾಸನ ನೀಡಬೇಕು.
2. ಅಳ್ಳೋಳ್ಳಿಯಲ್ಲಿ ರಂಗ ಶಿಕ್ಷಣ ಕೇಂದ್ರ ಸ್ಥಾಪಿಸಬೇಕು.
3. ಹಿರಿಯ ನಾಟಕರಾಗಿದ್ದ ಎಲ್.ಬಿ.ಕೆ. ಆಲ್ದಾಳ ಹಾಗೂ ಲಿಂ.ಹಂಪಯ್ಯ ಮಹಾಸ್ವಾಮಿಗಳ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ, ಸಾಮಾಜಿಕ, ರಂಗಭೂಮಿ ಕ್ಷೇತ್ರಕ್ಕೆ ಪ್ರಶಸ್ತಿ ನೀಡಬೇಕು.