ಕಲಬುರಗಿ | ಮೀಸಲಾತಿ ಎಂಬುದು ತಾಯಿಯ ಅಂತಃಕರಣದಂತೆ : ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2025-04-06 16:19 IST
ಕಲಬುರಗಿ | ಮೀಸಲಾತಿ ಎಂಬುದು ತಾಯಿಯ ಅಂತಃಕರಣದಂತೆ : ಪ್ರೊ.ಎಸ್.ಜಿ.ಸಿದ್ದರಾಮಯ್ಯ
  • whatsapp icon

ಕಲಬುರಗಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಒದಗಿಸಿರುವ ಮೀಸಲಾತಿಯು ಒಬ್ಬ ತಾಯಿಯ ಅಂತಃಕರಣದ ಆಶಯವನ್ನು ಹೊಂದಿದೆ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಉಪಾಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು ಮತ್ತು ರೇಶ್ಮಿ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ರವಿವಾರ ನಗರ್ಡ್ ರೇಶ್ಮಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 'ಮಾನವೀಯ ಮೌಲ್ಯಗಳ ಕುರಿತು ಗಾಂಧೀಜಿಯವರ ವಿಚಾರಗಳು' ಎಂಬ ಶಿಬಿರದ ಉದ್ಘಾಟಿಸಿ, ಆಶಯ ನುಡಿಗಳನ್ನು ಆಡಿದರು.

ತಾಯಿಯಾದವಳು ಹೇಗೆ ತನ್ನೆಲ್ಲ ಮಕ್ಕಳಿಗೆ ಸಮಾನ ಪ್ರೀತಿಯನ್ನು ಹಂಚವುದರ ಜೊತೆಗೆ ತನ್ನ ಹೊಟ್ಟೆಯಲ್ಲಿ ಹುಟ್ಟಿದ ಅಂಗವಿಕಲ ಮಗುವಿಗೆ ವಿಶೇಷ ಪ್ರೇಮವನ್ನು ಉಣಿಸುತ್ತಾಳೋ ಹಾಗೆಯೇ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನಮಗೆ ಮೀಸಲಾತಿಯನ್ನು ನೀಡಿದ್ದಾರೆ. ಈ ಹೊತ್ತಿನ ನಮ್ಮ ಸರ್ಕಾರಗಳು ಅದರ ಮೂಲ ಆಶಯಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದು, ಬಾಬಾಸಾಹೇಬರ ಸಂವಿಧಾನದ ಒಟ್ಟಾರೆಯ ಆಶಯಕ್ಕೆ ಹಾಗೂ ಮೀಸಲಾತಿಗೆ ಧಕ್ಕೆ ತರುವ ರೀತಿಯಲ್ಲಿ ಕೆಲಸ ಮಾಡುತ್ತಿವೆ ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.

ದೆಹಲಿಯ ನಿರ್ಭಯ - ಕರ್ನಾಟಕದ ಸೌಜನ್ಯಳಂತೆ ನಮ್ಮ ಹೆಣ್ಣು ಮಕ್ಕಳು ಬೀದಿ ಕಾಮುಕರ ಬಲೆಗೆ ಬೀಳದಂತೆ ನಾವು ತಡೆಯಬೇಕಿದೆ. ಅವರಿಗೆ ನ್ಯಾಯ ಕೊಡದ - ಕೊಡಿಸದ ಈ ಸಮಾಜದ ಬಗ್ಗೆ ನನಗೆ ಅಸಮಾಧಾನವಿದೆ ಎಂದ ಅವರು, ಶಿಬಿರಾರ್ಥಿಗಳಿಗೆ ಈ ಬಗ್ಗೆ ಚಿಂತಿಸುವಂತೆ ಕರೆ ನೀಡಿದರು.

ಇಂತಹ ವಿಷಯಗಳಲ್ಲದೆ, ಪ್ರತಿದಿನವೂ ನಮ್ಮ ಸುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ ಅತ್ಯಾಚಾರಗಳಿಗೆ ನೀವು ಕಿವಿಯಾಗಬೇಕು, ತೆರೆದ ಮನಸ್ಸಾಗಬೇಕು, ಹೃದಯವಾಗಬೇಕು. ಆ ಮೂಲಕವೇ ಮಾತ್ರ ನಾವು ಗಾಂಧೀಜಿಯವರಿಗೆ ಗೌರವ ಸಲ್ಲಿಸಲು ಸಾಧ್ಯವಿದೆ ಎಂದು ಹೇಳಿದರು.

ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರಿಗಾದ ಅನ್ಯಾಯವನ್ನು ಅವರು ವ್ಯಕ್ತಿಗತವಾಗಿ ಸ್ವೀಕರಿಸದೇ, ಅದನ್ನು ಸಮಾಜದ ಪಿಡುಗಾಗಿ ಕಂಡರು. ಆ ಕಾರಣಕ್ಕಾಗಿಯೇ ಭಾರತದಿಂದ ಆಫ್ರಿಕಾಗೆ ಹೋಗಿದ್ದ 'ಬ್ಯಾರಿಸ್ಟರ್' ಗಾಂಧಿ, ಮರಳಿ ಭಾರತಕ್ಕೆ ಬರುವಾಗ 'ಸತ್ಯಾಗ್ರಹಿ' ಆಗಿ ಬಂದರು. ಗಾಂಧೀಜಿಯವರ ಸಂಘಟನಾತ್ಮಕ ಹೋರಾಟಗಳ ಫಲವಾಗಿ ಭಾರತದಿಂದ ವಸಾಹತುಶಾಹಿಗಳು ಸಂಪೂರ್ಣವಾಗಿ ಹೊರಟುಹೋದರು. ಆದರೆ ಸಾಂಸ್ಕೃತಿಕ ದಾಸ್ಯತ್ವ ಉಳಿಯಿತು. ಆದರೆ ಆಫ್ರಿಕಾವನ್ನು ಈ ಸಂದರ್ಭಕ್ಕೂ ವಸಾಹತುಶಾಹಿಗಳು ಸಂಪೂರ್ಣವಾಗಿ ತಮ್ಮ ಹತೋಟಿಯಲ್ಲಿ ಇಟ್ಟುಕೊಂಡಂತೆ ಆ ದೇಶವನ್ನು ಸುಲಿಯುತ್ತಿವೆ ಎಂದರು.

ಈ ಎಲ್ಲಾ ಅನಾಹುತಗಳನ್ನು ಇಲ್ಲವಾಗಿಸುವ ಪ್ರಯತ್ನದ ನಡೆಗೆ ಗಾಂಧೀಜಿಯವರ 'ಅಹಿಂಸೆ' ಮಾತ್ರ ನಮಗೆ ಅಸ್ತ್ರವಾಗಬಲ್ಲದು ಎಂದ ಅವರು, ಇದನ್ನು ಮಹಿಳೆಯರು ಮಾತ್ರ ಅತ್ಯಂತ ಪರಿಣಾಮಕಾರಿಯಾಗಿ ಬಳಸಬಲ್ಲರು ಎಂಬುದು ನನ್ನ ಬಲವಾದ ನಂಬಿಕೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಉಪಕುಲಪತಿ ಡಾ.ಶಾಂತಾದೇವಿ, ಡಾ.ಭಾರತಿ ರೆಷ್ಮಿ, ಸರ್ವೋದಯ ವರ್ಕರ್ ಅಬ್ದುಲ್ ಭಾಯ್, ಡಾ.ಅಬೆದಾ ಬೇಗಂ, ಡಾ. ಅಶೋಕ್ ಕುಮಾರ್ ಸುರಪುರ, ಡಾ. ಗೀತಾ ಆರ್.ಎಂ. ಸೇರಿದಂತೆ ಇತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News