ಡ್ರಗ್ಸ್ ಹಾವಳಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ : ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ : ಯುವಕರು ಡ್ರಗ್ಸ್ ಹಾಗೂ ಅಫೀಮುಗಳಂತ ದುಷ್ಚಟಗಳಿಗೆ ಬಲಿಯಾಗಿ ಅಡ್ಡದಾರಿ ಹಿಡಿಯದಂತೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಕ್ರಮ ವಹಿಸುತ್ತಿದ್ದು, ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಂದ, ಡ್ರಗ್ ಪೆಡ್ಲರ್ ಗಳಿಂದ ವಶಪಡಿಸಿಕೊಂಡ ಮಾದಕ ವಸ್ತು ಹಾಗೂ ಶೆಡ್ಯೂಲ್ ಹೆಚ್ ಡ್ರಗ್ಸ್ ನ್ನು ವೀಕ್ಷಿಸಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಗೃಹ ಸಚಿವರ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸಮಗ್ರ ಚರ್ಚೆ ನಡೆಸಲಾಗಿದ್ದು, ಡ್ರಗ್ಸ್ ಹಾವಳಿ ಸಂಪೂರ್ಣ ನಿಯಂತ್ರಣ ಮಾಡಲು ಸಂಬಂಧಿಸಿದ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಕಳೆದ ವರ್ಷಕ್ಕೆ ಹೋಲಿಸಿದರೆ ಕಮೀಷನರೇಟ್ ವ್ಯಾಪ್ತಿಯಲ್ಲಿ ಪೊಲೀಸರು ನಿರಂತರ ದಾಳಿ ಮಾಡುವ ಮೂಲಕ ಮಾದಕ ದ್ರವ್ಯ ಪದಾರ್ಥಗಳಾದ ಗಾಂಜಾ, ಡ್ರಗ್ ಹಾಗೂ ಶೆಡ್ಯುಲ್ ಹೆಚ್ ಡ್ರಗ್ಸ್ ನ್ನು ವಶಪಡಿಸಿಕೊಂಡು, ಮಾರಾಟಗಾರ ಹಾಗೂ ಖರೀದಿದಾರರ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ. 2024ರ ಸಾಲಿನಲ್ಲಿ 58 ಕೇಸು ದಾಖಲಿಸಿಕೊಂಡು, 59 ಆರೋಪಿಗಳನ್ನು ದಸ್ತಗಿರಿ ಮಾಡಿ ಅವರಿಂದ 20 ಕಿಲೋ ಗಾಂಜಾ ವಶಪಡಿಸಿಕೊಂಡಿದ್ದರು. ಆದರೆ 2025 ರ ಸಾಲಿನಲ್ಲಿ 172 ಕೇಸ್ ದಾಖಲಿಸಿಕೊಂಡು 176 ಆರೋಪಿಗಳನ್ನು ದಸ್ತಗಿರಿ ಮಾಡಿ ಅವರಿಂದ 100 ಕೆಜಿ ಗಾಂಜಾ ಹಾಗೂ 776 ಕೆಜಿ ಶೆಡ್ಯೂಲ್ ಡ್ರಗ್ ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ಇದೂವರೆಗೆ ವಶಪಡಿಸಿಕೊಂಡ ಡ್ರಗ್ಸ್ ಹಾಗೂ ಶೆಡ್ಯುಲ್ ಡ್ರಗ್ ಮೌಲ್ಯ ಅಂದಾಜು ರೂ 23 ಲಕ್ಷ ರೂ. ಮೌಲ್ಯದ್ದಾಗಿದೆ ಎಂದು ಸಚಿವರು ವಿವರಿಸಿದರು.
ಡ್ರಗ್ಸ್ ಹಾವಳಿಯಿಂದ ಯುವಕರನ್ನು ಅದರಲ್ಲೂ ವಿದ್ಯಾರ್ಥಿಗಳನ್ನು ಕಾಪಾಡುವ ದೃಷ್ಟಿಯಿಂದ ಹಲವಾರು ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು ಎಂದ ಸಚಿವರು, ಶಾಲಾ ಕಾಲೇಜು ಹಾಗೂ ಯೂನಿವರ್ಸಿಟಿ ಗಳಲ್ಲಿ ಜಾಗೃತಿ ಸಭೆ ಹಾಗೂ ಕಾರ್ಯಕ್ರಮ ನಡೆಸಲಾಗುವುದು. ನಂತರ, ಅಭಿಯಾನ ನಡೆಸಿ ಸಾರ್ವಜನಿಕ ಅರಿವು ಮೂಡಿಸಲಾಗುವುದು ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಯನ್ನು ತುಂಬಲು ಕ್ರಮವಹಿಸಲಾಗುತ್ತಿದೆ ಎಂದ ಸಚಿವರು, ಮೊದಲಿಗೆ ಪ್ರಾಥಮಿಕ ಶಾಲೆಗಳಿಗೆ ಒಟ್ಟು 5,520 ಶಿಕ್ಷಕರ ಹುದ್ದೆ ತುಂಬಲಾಗುವುದು ಎಂದರು.
ಮಹಾನಗರ ಪಾಲಿಕೆ ವ್ಯಾಪ್ತಿಯ ಅಪ್ಪನ ಕೆರೆ ಸೇರಿದಂತೆ 23 ಉದ್ಯಾನವನಗಳ ಸಮಗ್ರ ಅಭಿವೃದ್ದಿ ಪಡಿಸಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಇದೇ ಸಂದರ್ಭದಲ್ಲಿ ಹೇಳಿದರು.
ಸಚಿವ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾತನಾಡಿ, ನಾಳೆ(ಎ.16)ರಂದು ನಡೆಯುವ ಉದ್ಯೋಗ ಮೇಳದಲ್ಲಿ ಸುಮಾರು 1 ಲಕ್ಷ ಉದ್ಯೋಗ ಒದಗಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ 22,000 ಕ್ಕೂ ಅಧಿಕ ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದಾರೆ. ಒಟ್ಟು 280ಕ್ಕೂ ಅಧಿಕ ಕಂಪನಿಗಳು ಭಾಗವಹಿಸಲಿದ್ದು, ಅಭ್ಯರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಅಯ್ಕೆ ಮಾಡಿ ಅಂತವರಿಗೆ ನೇಮಕಾತಿ ಆದೇಶ ನೀಡಲಾಗುವುದು ಎಂದು ಹೇಳಿದರು.
ಉದ್ಯೋಗ ಮೇಳದಲ್ಲಿ ಈಗಾಗಲೇ ಯುವನಿಧಿ ಯೋಜನೆಯಡಿಯಲ್ಲಿ ಹೆಸರು ದಾಖಲಿಸಿಕೊಂಡ ಅಭ್ಯರ್ಥಿಗಳಿಗೆ ಕೂಡಾ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಕಕ ಭಾಗದ ಸುಮಾರು 75,000 ಅಭ್ಯರ್ಥಿಗಳಿಗೆ ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಈಗಾಗಲೇ ಮೆಸೇಜ್ ಕಳಿಸಲಾಗಿದೆ. ಕಲಬುರಗಿ ನಂತರ, ಮೈಸೂರು ಹಾಗೂ ಬೆಳಗಾವಿ ವಿಭಾಗದಲ್ಲಿಯೂ ಕೂಡಾ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದರು.
ಕಲಬುರಗಿ ಯನ್ನು ಹೆಲ್ತ್ ಕ್ಲಬ್ ಮಾಡುವ ಉದ್ದೇಶದಿಂದ ಹಲವಾರು ಆರೋಗ್ಯ ಸಂಸ್ಥೆಗಳನ್ನು ಸ್ಥಾಪಿಸಲಾಗುತ್ತಿದೆ. ನಾಳೆ ಸಿಎಂ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಎಂ.ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.
ಕೆಕೆ ಆರ್ ಡಿಬಿ ಅಧ್ಯಕ್ಷ ಅಜಯ್ ಸಿಂಗ್ ಮಾತನಾಡಿ, ಕೆಕೆಆರ್ ಡಿಬಿಗೆ ಬಿಡುಗಡೆಯಾಗುವ ಅನುದಾನದಲ್ಲಿ ಕಡ್ಡಾಯವಾಗಿ ಶೇ.25 ರಷ್ಟು ಅನುದಾನವನ್ನು ಶೈಕ್ಷಣಿಕ ಅಭಿವೃದ್ದಿಗೆ ಬಳಸಿಕೊಳ್ಳಲಾಗುವುದು ಎಂದರು.
ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯಾಗಿದ್ದು, ಇದು ಜಾತಿ ಗಣತಿ ಅಲ್ಲ ಸ್ಪಷ್ಟಪಡಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಇದನ್ನು ಜಾತಿ ಗಣತಿ ಎಂದು ಯಾಕೆ ಹೇಳುತ್ತಿದ್ದೀರಿ. ಇದೇ 17 ರಂದು ಆಯೋಗದವರು ಸಚಿವ ಸಂಪುಟಕ್ಕೆ ಸಂಪೂರ್ಣ ವರದಿ ಸಲ್ಲಿಸಲಿದ್ದಾರೆ. ಈ ಬಗ್ಗೆ ಸಂಪುಟದಲ್ಲಿ ನಂತರ ಅಧಿವೇಶನದಲ್ಲಿಚರ್ಚೆ ನಡೆಸಲಾಗುವುದು ಎಂದರು.
ಇದಕ್ಕೂ ಮೊದಲು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯಿಂದ ಬಿಡುಗಡೆಯಾದ ರೂ 112.50 ಲಕ್ಷ ರೂ. ಅನುದಾನದಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯಕ್ಕೆ ಒಟ್ಟು 9 ನೂತನ ವಾಹನಗಳನ್ನು ಖರೀದಿಸಲಾಗಿದೆ. ಇವುಗಳಲ್ಲಿ 5 ಬೊಲೋರೋ, 3 ಟೆಂಪೋಟ್ರಾವಲರ್, 1 ಸ್ಕಾರ್ಪಿಯೋ ಸೇರಿವೆ ಎಂದು ಮಾಹಿತಿ ನೀಡಿದರು.
ವೇದಿಕೆಯ ಮೇಲೆ ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಝ್ ಫಾತಿಮಾ, ಜಗದೇವ ಗುತ್ತೇದಾರ, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಕಮೀಷನರ್ ಶರಣಪ್ಪ, ಸಿಇಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಕಮೀಷನರ್ ಅವಿನಾಶ್ ಶಿಂಧೆ ಸೇರಿದಂತೆ ಹಲವರು ಇದ್ದರು.
ಉದ್ಘಾಟನೆ ಹಾಗೂ ಲೋಕಾರ್ಪಣೆ ಸಮಾರಂಭ :
ಕಲಬುರಗಿ ಜಿಲ್ಲೆಯ ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಸುಪರ್ ಸ್ಪೇಷಾಲಿಟಿ ಆಸ್ಪತ್ರೆ, ಒಟ್ಟು 216.53 ಕೋಟಿ ರೂ.ಗಳು ಹಾಗೂ ಬ್ರಾಕಿಥೆರಪಿ ವಿಕೀರಣ ಚಿಕಿತ್ಸೆ ಘಟಕದ ಒಟ್ಟು 6.20 ಕೋಟಿ ರೂ.ಗಳು.
ವಿವಿಧ ಕಾಮಗಾರಿಗಳ ಅಡಿಗಲ್ಲು ಸಮಾರಂಭ :
1. 200 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ (ಅಂದಾಜು ಮೊತ್ತ 92.00 ಕೋಟಿ ರೂ.ಗಳು )
2. ಕಲಬುರಗಿ ಜಿಲ್ಲೆಯ ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ 150 ಹಾಸಿಗೆಗಳ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಆರೋಗ್ಯ ಘಟಕ ಕಟ್ಟಡ ನಿರ್ಮಾಣ ಕಾಮಗಾರಿ (ಅಂದಾಜು ಮೊತ್ತ 92.00 ಕೋಟಿ ರೂ.ಗಳು)
3. ಕಲಬುರಗಿ ಜಿಲ್ಲೆಯ ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ 210 ಹಾಸಿಗೆಗಳ ಹೊಸ ಕ್ಯಾನ್ಸರ್ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ ಅಂದಾಜು ಮೊತ್ತ 76.00 ಕೋಟಿ ರೂ.ಗಳು)
4. ಕಲಬುರಗಿ ಜಿಲ್ಲೆಯ ಗುಲಬರ್ಗಾ ವಿಶ್ವವಿದ್ಯಾಲಯ ಅವರಣದಲ್ಲಿ ನೂತನ ಜಿಟಿಟಿಸಿ-ಬಹುಕೌಶಲ್ಯ ಅಭಿವೃದ್ಧಿ ಕೇಂದ್ರ (MSDC) ಕಟ್ಟಡ ನಿರ್ಮಾಣ ಕಾಮಗಾರಿಯ ಮತ್ತು ಕೌಶಲ್ಯ ತರಬೇತಿ ಪ್ರಯೋಗಾಲಯಗಳ (ಅಂದಾಜು ಮೊತ್ತ 50.61 ಕೋಟಿ ರೂ.ಗಳು)
5. ಕಲಬುರಗಿಯಲ್ಲಿ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ (ಅಂದಾಜು ಮೊತ್ತ 49.50 ಕೋಟಿ ರೂ.ಗಳು)
6. ಕಲಬುರಗಿ ಜಿಲ್ಲೆಯ ಡಿಎಚ್ ಓ ಆವರಣದಲ್ಲಿ ಆರೋಗ್ಯ ಭವನ ಕಟ್ಟಡ ನಿರ್ಮಾಣ ಕಾಮಗಾರಿ (ಅಂದಾಜು ಮೊತ್ತ28.00 ಕೋಟಿ ರೂ.ಗಳು)
7. ಕಲಬುರಗಿ ಜಿಲ್ಲೆಯ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಐಟಿಐ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ (ಅಂದಾಜು ಮೊತ್ತ 20.00 ಕೋಟಿ ರೂ.ಗಳು)
8. 2024-25ನೇ ಸಾಲಿನ ಎಸ್.ಸಿ.ಪಿ/ಟಿ.ಎಸ್.ಪಿ ಮತ್ತು ಪಿ.ಎಂ. ಉಷಾ ಯೋಜನೆ ಅಡಿಯಲ್ಲಿ ಸರಕಾರಿ ಮಹಾವಿದ್ಯಾಲಯ (ಸ್ವಾ) ಕಲಬುರಗಿ ನೂತನ ಸಭಾಂಗಣದ ಕಟ್ಟಡ ಕಾಮಗಾರಿ ಅಂದಾಜು ಮೊತ್ತ 13.20 ಕೋಟಿ ರೂ.ಗಳು.