ಕಲಬುರಗಿ | ಸಂವಿಧಾನ ಸಂರಕ್ಷಕರ ಪಡೆ ಕಟ್ಟಲು ‘ಬೈಕ್ ಜಾಥಾ’

ಕಲುಬುರಗಿ : ಕೋಮುವಾದಿಗಳ ಕುತಂತ್ರದಿಂದ ಸಂವಿಧಾನವನ್ನು ಸಂರಕ್ಷಿಸಿಕೊಳ್ಳುವುದರ ಸಲುವಾಗಿ ‘ದೇಶಪ್ರೇಮಿ ಯುವ ಆಂದೋಲನ’ ತಂಡದಿಂದ ಸಂವಿಧಾನ ಸಂರಕ್ಷಕರ ಪಡೆ ಕಟ್ಟಲು ಸೋಮವಾರ ಕಲಬುರಗಿ ಜಿಲ್ಲೆಯ ವಾಡಿಯಿಂದ ಬೈಕ್ ಜಾಥಾ ಚಾಲನೆಗೊಂಡಿದೆ.
ಜಾಥದಲ್ಲಿ ಭಾಗವಹಿಸಿರುವ ಸರೋವರ್ ಬೆಂಕಿಕೆರೆ ಮಾತನಾಡಿ, ‘ಅಂಬೇಡ್ಕರ್ ರಾಜ್ಯದ ಕಲಬುರಿಗೆ ಜಿಲ್ಲೆಯ ವಾಡಿಗೆ ಭೇಟಿ ನೀಡಿದ ಸ್ಥಳವಾದ್ದರಿಂದ ಇಲ್ಲಿಂದಲೇ ನಮ್ಮ ಬೈಕ್ ಜಾಥಾ ಪ್ರಾರಂಭಿಸಿದ್ದೇವೆ. ಜಾಥಾದಲ್ಲಿ ವಿದ್ಯಾರ್ಥಿ ಯುವಜನರ ಸಮಸ್ಯೆಗಳು ಮತ್ತು ಸಂವಿಧಾನದ ಸಂರಕ್ಷಣೆಯಲ್ಲಿ ಯುವಜನರ ಪಾತ್ರದ ಕುರಿತು ಪ್ರಚಾರ ಮಾಡಲಿದ್ದೇವೆ. ಈ ನಮ್ಮ ಬೈಕ್ ಯಾನವು ಎ.14ರಿಂದ ಎ.26ರ ವರೆಗೆ ನಡೆಯಲಿದ್ದು, 20 ಜಿಲ್ಲೆಗಳ ಮೂಲಕ, 2ಸಾವಿರ ಕಿ.ಮೀ. ಕ್ರಮಿಸಲಿದೆ ಎಂದು ಹೇಳಿದರು.
ಈ ಜಾಥಾವು 12 ದಿನಗಳು ನಡೆಯಲಿದ್ದು, ಹಲವು ತಾಲೂಕುಗಳನ್ನು ಹಾಗೂ ಊರುಗಳನ್ನು ಸುತ್ತಾಡಿಕೊಂಡು ಎ.25ರಂದು ದಾವಣಗೆರೆ ತಲುಪಲಿದ್ದೇವೆ. ನಾವು ಹಾದು ಹೋಗುವ ಜಿಲ್ಲೆಗಳಲ್ಲಿ, ತಾಲೂಕು ಕೇಂದ್ರಗಳಲ್ಲಿ, ಊರುಗಳಲ್ಲಿ ಯುವಜನರೊಂದಿಗೆ ವಿದ್ಯಾರ್ಥಿ ಯುವಜನರ ಸಮಸ್ಯೆಗಳನ್ನು ಮತ್ತು ಸಂವಿಧಾನದ ಪ್ರಾಮುಖ್ಯತೆಗಳನ್ನು ಹಾಗೂ ಎ.26ರ ದಾವಣಗೆರೆ ಸಮಾವೇಶದ ಕುರಿತು ಚರ್ಚಿಸುತ್ತಾ, ಪ್ರಚಾರ ನಡೆಸುತ್ತಾ ಸಾಧ್ಯವಾದ ಕಡೆ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಾ ಸಾಗುತ್ತೇವೆ ಎಂದು ಸರೋವರ್ ಮಾಹಿತಿ ನೀಡಿದರು.
ವಿದ್ಯಾರ್ಥಿ ನಾಯಕ ಹೇಮಂತ್ ಸಕಲೇಶ್‍ಪುರ ಮಾತನಾಡಿ, ಎ.26ರಂದು ದಾವಣಗೆರೆಯಲ್ಲಿ ರಾಜ್ಯದ ಪ್ರತಿ ಜಿಲ್ಲೆಯಿಂದ ಸಂವಿಧಾನ ಸಂರಕ್ಷಕರ ತಂಡಗಳ ಬರಲಿದೆ. ಹಾಗೆಯೇ ರಾಜ್ಯದ ಮತ್ತು ದೇಶದ ಜನಚಳವಳಿಗಳ ಮುಂದಾಳುಗಳು ಅಂದು ಆಗಮಿಸಲಿದ್ದು, ಸಾಂಸ್ಕೃತಿಕ ತಂಡಗಳಿಂದ ಕಲಾ ಕಹಳೆ ಮೊಳಗಲಿದೆ. ಈ ನಮ್ಮ ಬೈಕ್ ಜಾಥದಲ್ಲಿ ವಿದ್ಯಾರ್ಥಿ ಯುವಜನರು ನಮ್ಮೊಂದಿಗೆ ಭಾಗವಹಿಸಿ, ಸಂವಿಧಾನ ರಕ್ಷಿಸಿಕೊಳ್ಳಲು ನಡೆಸುತ್ತಿರುವ ಸಂವಿಧಾನ ಸಂರಕ್ಷರ ಪಡೆಯಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು.
ಈ ವೇಳೆಯಲ್ಲಿ ಅಂಬೇಡ್ಕರ್ ರ ಒಡನಾಟದಲ್ಲಿದ್ದು ಬಾಬಾಸಾಹೇಬರ ಜೊತೆಯೇ ಬೌದ್ಧಧಮ್ಮ ಸ್ವೀಕರಿಸಿದ ವಾಡಿಯ ಅಮೃತರಾವ್ ಕೋಮಟೆ ಅವರ ಮಗ ಟೋಪಣ್ಣ ಕೋಮಟೆ ಯುವ ತಂಡಕ್ಕೆ ಬಾಬಾಸಾಹೇಬರ ಬಾವುಟ ನೀಡಿ ಉದ್ಘಾಟಿಸಿ, ಶುಭ ಕೋರಿದರು.
ಬೈಕ್ ಜಾಥದಲ್ಲಿ ದೇಶಪ್ರೇಮಿ ಯುವ ಆಂದೋಲನ ಸದಸ್ಯರಾದ ದುರ್ಗೇಶ್, ಮರಿಸ್ವಾಮಿ, ಯಮುನಾ, ರವಿ ನವಲಹಳ್ಳಿ, ಶರಣು, ಗೀತಾ, ಕೌಶಲ್ಯ, ಯಮನೂರು ಸೇರಿದಂತೆ ಹಲವರು ಭಾಗವಹಿಸಿದ್ದಾರೆ.