ಕಲಬುರಗಿ | ಅತ್ತೆಯ 11 ಲಕ್ಷ ರೂ. ಹಣ ಕದ್ದ ಅಳಿಯನ ಬಂಧನ : ಎಸ್ಪಿ ಅಡ್ಡೂರು ಶ್ರೀನಿವಾಸುಲು

ಆರೋಪಿ ಮೀನಪ್ಪ
ಕಲಬುರಗಿ : ಮಹಿಳೆಯೊಬ್ಬರು ತಮ್ಮ ಮನೆಯಲ್ಲಿಟ್ಟಿದ್ದ 11 ಲಕ್ಷ ರೂ. ಹಣ ಕಳ್ಳತನವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಸಹೋದರನ ಮಗ (ಅಳಿಯ)ನೇ ಹಣ ಕದ್ದಿರುವ ಮಾಹಿತಿಯನ್ನು ಪತ್ತೆ ಹಚ್ಚುವಲ್ಲಿ ಕಾಳಗಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ತಿಳಿಸಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.28 ರಂದು ಕಾಳಗಿ ಪಟ್ಟಣದಲ್ಲಿನ ಮನೆಯೊಂದರ ಕಬ್ಬಿಣದ ಪೆಟ್ಟಿಗೆಯಲ್ಲಿಟ್ಟಿದ್ದ 11 ಲಕ್ಷ ರೂ. ಹಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ, ಆತನಿಂದ 9 ಲಕ್ಷದ 30 ಸಾವಿರ ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದರು.
ಕಾಳಗಿ ತಾಲೂಕಿನ ಇವಣಿ ಗ್ರಾಮದ ನಿವಾಸಿ ಮೀನಪ್ಪ (38) ಬಂಧಿತ ಆರೋಪಿಯಾಗಿದ್ದು, ಇತನ ಸಹೋದರ ಅನೀಲ ಅಲಿಯಾಸ್ ಆನಂದ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಮಹೇಶ್ ಮೇಘಣ್ಣನವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಜಗದೇವಪ್ಪ ಪಾಳಾ ಸೇರಿದಂತೆ ಮತ್ತಿತರ ಸಿಬ್ಬಂದಿ ಇದ್ದರು.