ಕಲಬುರಗಿಯಲ್ಲಿ ಉದ್ಯೋಗ ಮೇಳ : ವಿವಿಧೆಡೆ ವಾಹನ ಸಂಚಾರ ನಿಷೇಧಿಸಿ ಪೊಲೀಸ್ ಕಮಿಷನರ್ ಆದೇಶ

ಡಾ.ಶರಣಪ್ಪ ಎಸ್.ಡಿ.
ಕಲಬುರಗಿ : ನಗರದ ರಿಂಗ್ ರಸ್ತೆಯಲ್ಲಿರುವ ಕೆಸಿಟಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಉದ್ಯೋಗ ಮೇಳ ಇರುವುದರಿಂದ ಸೇಡಂ ರಿಂಗ್ ರೋಡ್‌ನಿಂದ ಹುಮನಾಬಾದ್ ರಿಂಗ್ ರೋಡ್‌ನಲ್ಲಿ ಭಾರಿ ವಾಹನಗಳ ಓಡಾಟವನ್ನು ನಿಷೇಧಿಸಿ ಪೊಲೀಸ್ ಕಮಿಷನರ್ ಡಾ.ಶರಣಪ್ಪ ಎಸ್.ಡಿ. ಅವರು ಆದೇಶ ಹೊರಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಲಬುರಗಿ ವಿಭಾಗ ಮಟ್ಟದ ಬೃಹತ್ ಉದ್ಯೋಗ ಮೇಳದ ಬಹಿರಂಗ ಕಾರ್ಯಕ್ರಮ ಮತ್ತು ಕಲಬುರಗಿ ನಗರದ ಜಿಮ್ಸ್ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮ ಮತ್ತು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಅಡಿಗಲ್ಲು ಸಮಾರಂಭಕ್ಕೆ ಸಿಎಂ ಸಿದ್ದರಾಮಯ್ಯ, ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿ.ಕೆ ಶಿವಕುಮಾರ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸದರಿ ಕಾರ್ಯಕ್ರಮಕ್ಕೆ ಕಲಬುರಗಿ ಜಿಲ್ಲೆಯ ವಿವಿಧ ಗ್ರಾಮ, ಕಲಬುರಗಿ ನಗರ ಹಾಗೂ ರಾಜ್ಯದ ವಿವಿಧ ಜಿಲ್ಲೆಯ ಸಾರ್ವಜನಿಕರು ಹಾಗೂ ಅಭ್ಯರ್ಥಿಗಳು ಆಗಮಿಸುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಕೆಲವೆಡೆ ವಾಹನಗಳ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಬೇಕೆಂದು ಅವರು ತಿಳಿಸಿದ್ದಾರೆ.
ದ್ವಿಚಕ್ರ ವಾಹನ, ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್ ಸ್ಥಳಗಳು ಹೀಗಿವೆ :
1. ಉದ್ಯೋಗ ಮೇಳಕ್ಕೆ ಆಗಮಿಸುವ ಸಾರ್ವಜನಿಕರು ಹಾಗೂ ಅಭ್ಯರ್ಥಿಗಳು ಕೆಸಿಟಿ ಕಾಲೇಜು ಆವರಣದಲ್ಲಿ ನಿಗದಿಪಡಿಸಿದ ಆಗಮನ ದ್ವಾರದ ಮೂಲಕ ಆಗಮಿಸಿ ಕೆಸಿಟಿ ಕಾಲೇಜು ಆವರಣದಲ್ಲಿ ಪಾರ್ಕಿಂಗ್ ಮಾಡುವುದು.
2. ಕಾರ್ಯಕ್ರಮಕ್ಕೆ ಆಗಮಿಸುವ ಸರಕಾರಿ ಬಸ್ ಗಳನ್ನು ಪೀರ್ ಬಂಗಾಲಿ ದರ್ಗಾದ ಆವರಣದಲ್ಲಿ ಪಾರ್ಕಿಂಗ್ ಮಾಡುವುದು.
3. ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಅಡಿಗಲ್ಲು ಸಮಾರಂಭದ ಸಮಯದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸಂಚಾರಿ ಮಾರ್ಗಗಗಳಲ್ಲಿ ಬದಲಾವಣೆ ಮಾಡಲಾಗಿರುತ್ತದೆ.
4. ಕಿದ್ವಾಯಿ ಕಾನ್ಸರ್ ಆಸ್ಪತ್ರೆ ಅಡಿಗಲ್ಲು ಸಮಾರಂಭಕ್ಕೆ ಆಗಮಿಸುವ ಸಾರ್ವಜನಿಕರು ವಿರೇಶ ನಗರ ಕ್ರಾಸ್ ದಿಂದ ಬಂದು ಜಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಪಾರ್ಕಿಂಗ್ ಮಾಡುವುದು.
5. ಜಿಮ್ಸ್ ಆಸ್ಪತ್ರೆಯಲ್ಲಿನ ಶವಾಗಾರಕ್ಕೆ ಹೋಗುವ ಮಾರ್ಗದಲ್ಲಿ ಎಲ್ಲಾ ರೀತಿಯ ವಾಹನಗಳ ಓಡಾಟ ನಿಷೇದಿಸಲಾಗಿದೆ.