ಕಲಬುರಗಿ | ಕೆಕೆಆರ್‌ಡಿಬಿಯಿಂದ ಪೊಲೀಸ್ ಇಲಾಖೆಗೆ ಹೊಸ ವಾಹನಗಳ ಹಸ್ತಾಂತರ

Update: 2025-04-15 21:18 IST
ಕಲಬುರಗಿ | ಕೆಕೆಆರ್‌ಡಿಬಿಯಿಂದ ಪೊಲೀಸ್ ಇಲಾಖೆಗೆ ಹೊಸ ವಾಹನಗಳ ಹಸ್ತಾಂತರ
  • whatsapp icon

ಕಲಬುರಗಿ : ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಕಲಬುರಗಿ ನಗರ ಮತ್ತು ಕಲಬುರಗಿ ಜಿಲ್ಲೆಯ ಪೊಲೀಸ್ ಇಲಾಖೆಗೆ ಮೊದಲ ಬಾರಿಗೆ ವಾಹನಗಳನ್ನು ಒದಗಿಸುವ ಮೂಲಕ ಕಾನೂನು ಪಾಲನೆಗೆ ಸಹ ಮಂಡಳಿ ಬದ್ಧವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.

ಮಂಗಳವಾರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸರಳ ಕಾರ್ಯಕ್ರಮದಲ್ಲಿ ವಾಹನಗಳನ್ನು ಹಸ್ತಾಂತರ ಮಾಡಿ ಮಾತನಾಡಿದ ಸಚಿವರು, 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಯೋಜನೆ ಅಡಿಯಲ್ಲಿ 112.50 ಲಕ್ಷ ರೂ. ಅನುದಾನ ಮತ್ತು 2025-26ನೇ ಸಾಲಿನ ವಾರ್ಷಿಕ ಯೋಜನೆ ಅಡಿಯಲ್ಲಿ 112.50 ಲಕ್ಷ ರೂ. ಅನುದಾನ ಸೇರಿದಂತೆ ಒಟ್ಟು 225.00 ಲಕ್ಷ ರೂ. ಮಂಜೂರಾತಿ ನೀಡಲಾಗಿದೆ ಎಂದರು.

ಮೊದಲನೇ ಹಂತದಲ್ಲಿ 112.50 ಲಕ್ಷ ರೂ. ಅನುದಾನ ಬಿಡುಗಡೆಯಾಗಿ ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯಕ್ಕೆ ಒಟ್ಟು 9 ವಿವಿಧ ವಾಹನಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿರುತ್ತದೆ. ಇದರಲ್ಲಿ 5 ಮಹೀಂದ್ರಾ ಬೋಲೆರೋ, 3 ಟೆಂಪೋ ಟ್ರಾವೆಲರ್ಸ್ ಹಾಗೂ 1 ಮಹಿಂದ್ರಾ ಸ್ಟಾರ್ಪಿಯೋ ವಾಹನ ಖರೀದಿಸಲಾಗಿದೆ.

ಕಲಬುರಗಿ ಜಿಲ್ಲಾ ಪೊಲೀಸ್ ಘಟಕಕ್ಕೆ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ) ವತಿಯಿಂದ 2024-25ನೇ ಸಾಲಿನಲ್ಲಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಸಾಮಾನ್ಯ ಯೋಜನೆ ಅಡಿಯಲ್ಲಿ 125.00 ಲಕ್ಷ ರೂ. ಅನುದಾನ ಮತ್ತು 2025-26ನೇ ಸಾಲಿನ ವಾರ್ಷಿಕ ಯೋಜನೆ ಅಡಿಯಲ್ಲಿ 125.00 ಲಕ್ಷ ರೂ. ಅನುದಾನ ಸೇರಿದಂತೆ ಒಟ್ಟು 250.00 ಲಕ್ಷ ರೂ. ಅನುದಾನಕ್ಕೆ ಮಂಜೂರಾತಿ ನೀಡಲಾಗಿದೆ.

ಮೊದಲನೇ ಹಂತದಲ್ಲಿ 125.00 ಲಕ್ಷ ರೂ. ಅನುದಾನ ಬಿಡುಗಡೆಯಾಗಿ ಕಲಬುರಗಿ ಜಿಲ್ಲಾ ಪೊಲೀಸ್ ಘಟಕಕ್ಕೆ ಒಟ್ಟು 8 ವಿವಿಧ ವಾಹನಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿರುತ್ತದೆ. ಇದರಲ್ಲಿ 4 ಮಹೀಂದ್ರಾ ಬೊಲೆರೋ, 2 ಮಹಿಂದ್ರಾ ಸ್ಕಾರ್ಪಿಯೋ ವಾಹನ, 1 ವಾಟರ್ ಟ್ಯಾಂಕರ್, 1 ಓಪನ್ ಟ್ರಕ್ ಖರೀದಿಸಲಾಗಿದೆ ಎಂದರು.

ನಂತರ ಮಾತನಾಡಿದ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಡಾ.ಅಜಯ್ ಸಿಂಗ್ ಅವರು, ಈ ವಾಹನಗಳ ಸೇವೆಯಿಂದ ಪೊಲೀಸ್ ಇಲಾಖೆಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಮರ್ಪಕವಾಗಿ ಸೇವೆ ಸಲ್ಲಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಪೊಲೀಸ್ ಇಲಾಖೆಯನ್ನು ಬಲಪಡಿಸುವ ದೃಷ್ಠಿಯಿಂದ ಗೃಹ ಸಚಿವರು ಮಂಡಳಿಗೆ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಅವುಗಳನ್ನು ಒಂದೊಂದಾಗಿ ಪರಿಹರಿಸಲಾಗುವುದು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದ ಮೊಟ್ಟ ಮೊದಲ ಬಾರಿಗೆ ಪೊಲೀಸ್ ಇಲಾಖೆಗೆ ವಾಹನಗಳನ್ನು ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶಿಲತೆ ಮತ್ತು ಜೀವನೋಪಾಯ ಸಚಿವರಾದ ಡಾ. ಶರಣಪ್ರಕಾಶ್ ಆರ್ ಪಾಟೀಲ್, ಶಾಸಕರುಗಳಾದ ಖನಿಜಾ ಫಾತಿಮಾ, ಅಲ್ಲಮ ಪ್ರಭು ಪಾಟೀಲ್, ಜಿಲ್ಲಾಧಿಕಾರಿಗಳಾದ ಫೌಝಿಯಾ ತರನ್ನುಮ್, ಕಲಬುಗಿ ನಗರ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಡಿ, ಕೆಕೆಆರ್ ಡಿಬಿ ಕಾರ್ಯದರ್ಶಿ ಎಂ. ಸುಂದರೇಶ್ ಬಾಬು, ಪೊಲೀಸ್ ಅಧೀಕ್ಷಕ ಅಡ್ಡೂರು ಶ್ರೀನಿವಾಸಲು ಸೇರಿದಂತೆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News