ಕಲಬುರಗಿ | ಕೈಗಾರಿಕೆ, ಸಣ್ಣ ಉದ್ಯಮಗಳ ಸ್ಥಾಪನೆಗಳಿಗೆ ಸೌಲಭ್ಯ ಒದಗಿಸಲು ಬದ್ಧ : ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ : ಕಲಬುರಗಿಯ ಸಮಗ್ರ ಅಭಿವೃದ್ದಿಗೆ ಸ್ಟೇಕ್ ಹೋಲ್ಡರ್ ಅವರ ಪಾತ್ರ ಪ್ರಮುಖವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕಳೆದ ಲೋಕಸಭಾ ಚುನಾಚಣೆಯ ಸಂದರ್ಭದಲ್ಲಿ ಎಲ್ಲಾ ಅಸೋಸಿಯೇಷನ್ ಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿ ಜಿಲ್ಲೆಯಲ್ಲಿ ಕೈಗಾರಿಕೆ ಕೃಷಿ ಹಾಗೂ ಔದ್ಯೋಗಿಕ ಅಭಿವೃದ್ದಿಗಾಗಿ ನೀಲ ನಕ್ಷೆ ತಯಾರಿಸುವುದಾಗಿ ಭರವಸೆ ನೀಡಲಾಗಿತ್ತು ಎಂದ ಸಚಿವರು, ಎಲೆಕ್ಟ್ರಾನಿಕ್ ಮ್ಯಾನುಫಾಕ್ಷರಿಂಗ್ ಘಟಕ ಸ್ಥಾಪನೆ, ಉತ್ಪಾದನಾಘಟಕಗಳ ಸ್ಥಾಪನೆ, ಕೃಷಿ, ಉದ್ಯೋಗ, ಕೋಲ್ಡ್ ಸ್ಟೋರೆಜ್, ವೇರ್ ಹೌಸ್ ಸ್ಥಾಪನೆ, ನಗರ ಸೌಂದರ್ಯೀಕರಣ, ಕ್ರೀಡಾ ಕ್ಷೇತ್ರದ ಅಭಿವೃದ್ದಿ, ವೇರ್ ಹೌಸ್ ಹಾಗೂ ಕೋಲ್ಡ್ ಸ್ಟೋರೆಜ್ ಸ್ಥಾಪನೆ, ಕ್ರೀಡಾಂಗಣಗಳ ಸ್ಥಾಪನೆ ಸೇರಿದಂತೆ ಅಭಿವೃದ್ದಿಗೆ ಮುಂದಿನ ಮೇ ತಿಂಗಳ ಮೊದಲ ವಾರದಲ್ಲಿ ಸಭೆ ನಡೆಸಲಾಗುವುದು, ಆಗ ಅಗತ್ಯವಿರುವ ಪ್ರಮುಖ ಸಲಹೆಗಳನ್ನು ನೀಡುವಂತೆ ಸಚಿವರು ಮನವಿ ಮಾಡಿದರು.
ಕಲಬುರಗಿ ನಗರದ ಖರ್ಗೆ ಪೆಟ್ರೋಲ್ ಪಂಪ್ ಬಳಿ ಫ್ಲೈ ಓವರ್, ಕಲಬುರಗಿ ವಿಮಾನ ನಿಲ್ದಾಣದವರೆಗೆ ನಾಲ್ಕು ಪಥಗಳ ರಸ್ತೆ ನಿರ್ಮಾಣ, ನಗರದ ಹೊರವಲಯದಲ್ಲಿ ಎಪಿಎಂಸಿ ಸ್ಥಾಪನೆಗೆ ನೂರು ಎಕರೆ ಜಮೀನು ಮಂಜೂರು, ಸೂಪರ್ ಮಾರ್ಕೆಟ್ ಬಳಿ ವಾಹನ ದಟ್ಟಣೆ ನಿವಾರಣೆಗಾಗಿ ಬಹುಮಹಡಿ ಪಾರ್ಕಿಂಗ್ ಕಟ್ಟಡ ಸ್ಥಾಪನೆ, ಕಲಬುರಗಿಯಿಂದ ದೇಶದ ಪ್ರಮುಖ ನಗರಗಳಿಗೆ ನೇರ ವಿಮಾನ ಸೇವೆ ಪ್ರಾರಂಭ ಸೇರಿದಂತೆ ಪ್ರಮಖ ಬೇಡಿಕೆಗಳನ್ನು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶರಣು ಪಪ್ಪಾ ಸಚಿವರಿಗೆ ಸಲ್ಲಿಸಿದರು.
ಆಗ ಉತ್ತರಿಸಿದ ಸಚಿವರು ಫ್ಲೈ ಓವರ್ ನಿರ್ಮಾಣಕ್ಕೆ ಈಗಾಗಲೇ ಕ್ರಮವಹಿಸಲಾಗಿದೆ. ಈ ಹಿಂದೆ ನಿರ್ಣಯ ಸಿದ್ದ ಫ್ಲೈಓವರ್ ಸ್ಥಾಪನೆ ಅವೈಜ್ಞಾನಿಕತೆಯಿಂದ ಕೂಡಿದ್ದರಿಂದ ಹೊಸ ಮಾದರಿಯ ಫೈ ಓವರ್ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ ಎಂದರು.
ಗ್ರೇನ್ ಅಂಡ್ ಸೀಡ್ಸ್ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷ ಸಂತೋಷ್ ಅವರು ಮಾತನಾಡಿ, ಕಲಬುರಗಿ ಎಲ್ಲಾ ಉದ್ಯಮಿದಾರರ ಬಗ್ಗೆ ಮಾಹಿತಿ ಒದಗಿಸುವ ಆ್ಯಪ್ ಸ್ಥಾಪನೆಗೆ ಒತ್ತಾಯಿಸಿದರು. ಪಿಪಿಪಿ ಮಾದರಿಯಲ್ಲಿ ಕನಿಷ್ಟ ನಾಲ್ಕು ಯೂನಿಫಾರಂ ಉದ್ಯಮಗಳ ಘಟಕ ಸ್ಥಾಪನೆ ಮಾಡುವಂತೆಯೂ ಕೂಡಾ ಮನವಿ ಮಾಡಿದರು.
ನಗರದ ಎಲ್ಲ ಅಸೋಸಿಯೇಷನ್ ಗಳ ಪ್ರತಿನಿಧಿಗಳೊಂದಿಗೆ ಮೇ ತಿಂಗಳಲ್ಲಿ ಸಭೆ ನಡೆಸುವ ಉದ್ದೇಶ ಹೊಂದಿದ್ದು, ನಿಮ್ಮ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು. ನಮ್ಮ ಚರ್ಚೆಯ ಮೂಲಕ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಲು ಸಲಹೆ ನೀಡಿ ಎಂದು ಸಚಿವರು ಪುನರುಚ್ಚರಿಸಿದರು.
ಹೈದರಾಬಾದ್ ಕರ್ನಾಟಕ ಚೆಂಬರ್ಸ್ ಆಪ್ ಕಾಮರ್ಸ್ ಇಂಡಸ್ಟ್ರೀಸ್, ಗ್ರೇನ್ ಅಂಡ್ ಸೀಡ್ಸ್ ಮರ್ಚೆಂಟ್ಸ್ ಅಸೋಸಿಯೇಷನ್, ಕಿರಾಣ ವ್ಯಾಪಾರಿ ಸಂಘ ಕಿರಾಣಾ ಬಜಾರ, ಕಲಬುರಗಿ ಅಗ್ರೋ ಇನ್ ಪುಟ್ ಡೀಲರ್ ಅಸೋಸಿಯೇಷನ್, ಕಪನೂರು ಇಂಡಸ್ಟ್ರಿಯಲ್ ಮ್ಯಾನುಫ್ಯಾಕ್ಷರಿಂಗ್ ಅಸೋಸಿಯೇಷನ್, ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ವೇಲ್ ಫೇರ್ಸ್ ಅಸೋಸಿಯೇಷನ್, ಹೈದರಾಬಾದ್ ಕರ್ನಾಟಕ ಮಷೀನರಿ, ಎಲೆಕ್ಟ್ರೀಕಲ್ ಗೂಡ್ಸ್ ಅಸೋಸಿಯೇಷನ್, ಕ್ಲಾಥ್ ಮರ್ಚೆಂಟ್ಸ್ ಅಸೋಸಿಯೇಷನ್ ಸೇರಿದಂತೆ ಸುಮಾರು 31 ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಕಪನೂರು ಇಂಡಸ್ಟ್ರೀಯಲ್ ಮ್ಯಾನುಫಾಕ್ಷರ್ಸ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಮುಕ್ಕಾ, ಕ್ರೀಡಾ ಅಸೋಸಿಯೇಷನ್ ಅಧ್ಯಕ್ಷ ಜೈಭೀಮ್ ದರ್ಗಿ ಮಾತನಾಡಿದರು.
ವೇದಿಕೆಯ ಮೇಲೆ ಎಂ ಎಲ್ ಸಿ ಜಗದೇವ ಗುತ್ತೇದಾರ, ಕುಡಾ ಅಧ್ಯಕ್ಷ ಮಹಜರ್ ಅಲಂಖಾನ್, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಎಸ್ ಪಿ ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಕಮೀಷನರ್ ಅವಿನಾಶ್ ಶಿಂಧೆ, ಡಾ.ಕಿರಣ್ ದೇಶ ಮುಖ್ ಇದ್ದರು.