ಕಲಬುರಗಿ | ವಕ್ಫ್ ಕೇವಲ ಆಸ್ತಿಯಲ್ಲ, ಮುಸ್ಲಿಮರ ಪ್ರತಿಬಿಂಬ : ನ್ಯಾ.ಅಬ್ದುಲ್ ಜಬ್ಬಾರ್ ಗೋಲಾ

ನ್ಯಾ.ಅಬ್ದುಲ್ ಜಬ್ಬಾರ್ ಗೊಲಾ
ಕಲಬುರಗಿ : ಮುಸ್ಲಿಮರ ವಿರುದ್ಧದ ವಕ್ಫ್ ತಿದ್ದುಪಡಿ ಮಸೂದೆಗೆ ಎರಡು ಉಭಯ ಸದನಗಳಲ್ಲಿ ಮಸೂದೆ ಪರ ವಿರೋಧ ಚರ್ಚೆ ಬಳಿಕ ಕೇಂದ್ರ ಸರಕಾರ ರಾತ್ರೋ ರಾತ್ರಿ ಅಂಗೀಕಾರ ಮಾಡಿಕೊಳ್ಳುವ ಮೂಲಕ ಯಶಸ್ವಿಯಾಗಿದ್ದು, ರಾಷ್ಟ್ರಪತಿಗಳು ಸಹ ಶನಿವಾರ ರಾತ್ರಿ ಮಸೂದೆಗೆ ಅಂಕಿತ ಹಾಕಿರುವುದು ಖಂಡನಾರ್ಹ ಎಂದು ಕಲಬುರಗಿ ಜಯಿಂಟ್ ಆಕ್ಷನ್ ಕಮಿಟಿಯ ಸದಸ್ಯ ನ್ಯಾ.ಅಬ್ದುಲ್ ಜಬ್ಬಾರ್ ಗೊಲಾ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೇಳಿಕೆ ನೀಡಿರುವ ಅವರು, ನೂರಾರು ವರ್ಷಗಳಿಂದ ಮುಸ್ಲಿಮ್ ಸಮುದಾಯದ ಅಭಿವೃದ್ಧಿಗಾಗಿ ದೇವರ ಹೆಸರಲ್ಲಿ ತನ್ನ ಅಮೂಲ್ಯವಾದ ಚರ ಮತ್ತು ಸ್ಥಿರಾಸ್ತಿಯನ್ನು ದಾನವಾಗಿ ನೀಡಿದ ಆಸ್ತಿಯು ಧಾರ್ಮಿಕ ವಕ್ಫ್: ಮಸೀದಿಗಳು, ಖಾನಖಾ, ಮದರಸಾ ಮತ್ತು ಖಬರಿಸ್ತಾನ್ ದಂತಹ ಧಾರ್ಮಿಕ ಚಟುವಟಿಕೆಗಳಿಗೆ ಸಮರ್ಪಿಸಲಾಗುತ್ತದೆ. ಶೈಕ್ಷಣಿಕ ವಕ್ಫ್:, ಶಾಲೆ, ಕಾಲೇಜುಗಳು ಅಥವಾ ವಿಶ್ವವಿದ್ಯಾಲಯಗಳಂತಹ ಶೈಕ್ಷಿಣಿಕ ಉದ್ದೇಶಕ್ಕಾಗಿ ವಕ್ಫ್ ಆಸ್ತಿಗಳು ಮೀಸಲಾಗಿರಿಸಲಾಗಿದೆ. ಚಾರಿಟಬಲ್ ವಕ್ಫ್; ಬಡ ನಿರ್ಗತಿಕ, ಅಂಗವಿಕಲರಿಗೆ, ಅನಾಥರಿಗೆ, ವಿಧವೆ ಮತ್ತು ವೃದ್ಧರಿಗೆ ಸಹಾಯ ಮಾಡುವಂತಹ ದತ್ತಿ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ಬೆಂಬಲ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಭವಿಷ್ಯದಲ್ಲಿ ವಕ್ಫ್ ಭೂಮಿಯನ್ನು ಒತ್ತುವರಿ ಮಾಡಿದವರನ್ನು ಪ್ರಶ್ನಿಸುವುದು ಅಪರಾಧವಾಗಿಸಿ, ವಕ್ಫ್ ಭೂಮಿಯನ್ನು ಸರಕಾರಿ ಭೂಮಿ ಎಂದು ಚರ್ಚೆ ಹುಟ್ಟಿಸಿ ಗಲಭೆಗಳನ್ನು ಎಬ್ಬಿಸಲು ಕೇಂದ್ರ ಸರಕಾರ ಹೊರಟಿದ್ದು, ವಕ್ಫ್ ನ್ಯಾಯ ಮಂಡಳಿಯ ಅಧಿಕಾರವನ್ನು ಕಿತ್ತುಕೊಂಡು, ಅದರ ತಲೆಯ ಮೇಲೆ ಜಿಲ್ಲಾಧಿಕಾರಿಯನ್ನು ಕೂರಿಸಿ ನೂರಾರು ವರ್ಷಗಳಿಂದ ದಾನ ನೀಡಿದ ದಾನಿಗಳ ಉದ್ದೇಶವನ್ನು ಈ ಸರಕಾರ ಮಣ್ಣುಪಾಲು ಮಾಡಲು ಹೊರಟಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರಕಾರ ದಲಿತರ ಮತ್ತು ಮಸೀದಿ, ಚರ್ಚ್ ಗಳ ಮೇಲೆ ದಾಳಿ ನಡೆಸಿ ಅಲ್ಪಸಂಖ್ಯಾತರ ಮೇಲೆ ನಿರಂತರ ದಬ್ಬಾಳಿಕೆಯ ನಡೆಸುತ್ತಾ ಬಂದಿದೆ. ಮುಸ್ಲಿಂ ವಿರುದ್ಧವಾಗಿ ಸಿಎಎ, ಎನ್.ಆರ್.ಸಿ, ಹಿಜಾಬ್, ಯುಸಿಸಿ, ವಕ್ಫ್ ತಿದ್ದುಪಡಿ ಮಸೂದೆಯಂತ ಸಂವಿಧಾನ ವಿರೋಧಿ ಕಾನೂನನ್ನು ಜಾರಿಗೆ ತರುವ ಮೂಲಕ ಸಂವಿಧಾನದ ಮೇಲೆ ಹಂತ ಹಂತವಾಗಿ ಗದಾ ಪ್ರಹಾರ ಮಾಡುತ್ತಿರುವ ಬಗ್ಗೆ ಜನ ಜಾಗೃತಿ ಅಗತ್ಯವಿದೆ ಎಂದರು.