ಕಲಬುರಗಿ | ಸರಣಿ ಅಪಘಾತ ಮೂವರು ಸ್ಥಳದಲ್ಲೇ ಮೃತ್ಯು
ಕಲಬುರಗಿ : ಕಬ್ಬಿನ ಲಾರಿ, ಟೆಂಪೋ ಮತ್ತು ಬೈಕ್ ನಡುವೆ ಸರಣಿಯ ಅಪಘಾತ ಸಂಭವಿಸಿದ ಪರಿಣಾಮ, ಸ್ಥಳದಲ್ಲಿ ಮೂವರು ಮೃತಪಟ್ಟಿದ್ದು, 5ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಅಫಜಲಪುರ ಮುಖ್ಯ ರಸ್ತೆಯ ಗೊಬ್ಬುರ (ಬಿ) ಸಮೀಪ ನಡೆದಿದೆ.
ಕಲಬುರಗಿ ನಗರದ ಸ್ಟೇಶನ್ ಬಜಾರ್ ನಿವಾಸಿಗಳಾದ ವಿನಿತಾ ರವಿರಾವ್ (54), ಅನುಪ್ ಮಾಧವ್ ಬೆಂಗೇರಿ(29) ಮತ್ತು ಗೊಬ್ಬರ್ ಬಿ ಗ್ರಾಮದ ನಿವಾಸಿ ಬೈಕ್ ಸವಾರ ಬಸವರಾಜ್ ಚಿಸ್ತಿ ಮೃತಪಟ್ಟರೆಂದು ಗುರುತಿಸಲಾಗಿದೆ.
ಘಟನೆಯಲ್ಲಿ 5ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿರುವುದು ವರದಿಯಾಗಿದೆ.
ಟೆಂಪೊದಲ್ಲಿದ್ದ ಮೃತರಿಬ್ಬರು ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದ ದರ್ಶನ ಪಡೆದು ಕಲಬುರಗಿ ಯತ್ತ ತೆರಳುತ್ತಿದ್ದರು. ಈ ವೇಳೆಯೇ ಲಾರಿ, ಟೆಂಪೋ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳಕ್ಕೆ ಎಸ್.ಪಿ ಅಡ್ಡೂರು ಶ್ರೀನಿವಾಸಲು ಮತ್ತು ಡಿಎಸ್ಪಿ ಗೊಪಿ ಬಿ.ಆರ್, ಸಿಪಿಐ ಪ್ರಕಾಶ್ ಯಾತನೂರ್, ಸಿಬ್ಬಂದಿ ಸಂಗಣ್ಣ ಸೇರಿದಂತೆ ಗಣಗಾಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತಾಗಿ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.