ಕಲಬುರಗಿ | ಅಮಿತ್ ಶಾ ಹೇಳಿಕೆ ಖಂಡಿಸಿ ವಕೀಲರ ಪ್ರತಿಭಟನೆ

Update: 2024-12-25 10:32 GMT

ಕಲಬುರಗಿ : ಕೇಂದ್ರ ಗೃಹ ಸಚಿವ ಅಮಿತಾ ಶಾ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡಿಸಿ ಆಳಂದ ಪಟ್ಟಣದ ಸ್ಥಳೀಯ ನ್ಯಾಯವಾದಿಗಳ ಸಂಘವು ಪ್ರತಿಭಟನೆ ನಡೆಸಿದೆ.

ಆಳಂದ ಪಟ್ಟಣದ ಹೊರವಲಯದ ತಾಲ್ಲೂಕು ಆಡಳಿತಸೌಧ ಮುಂದೆ ನ್ಯಾಯವಾದಿ ಸಂಘದ ಅಧ್ಯಕ್ಷ ಕಮಲ್ ವಿ.ರಾಠೋಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನ್ಯಾಯವಾದಿಗಳು, ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಕೂಡಲೇ ಶಾ ವಿರುದ್ಧ ಕ್ರಮಕೈಗೊಂಡು ಅವರನ್ನು ಸಚಿವ ಸಂಪುಟದಿoದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಭಾರತದ ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2024ರ ಡಿ.17ರಂದು ರಾಜ್ಯಸಭೆಯಲ್ಲಿ ನಡೆದ 76ನೇ ಸಂವಿಧಾನ ದಿನಾಚರಣೆ ಸಂದರ್ಭದಲ್ಲಿ ಮಾಡಿದ ಅವಮಾನಕಾರಿ ಹೇಳಿಕೆಗಳಿಗೆ ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತೇವೆ ಮತ್ತು ಖಂಡಿಸುತ್ತೇವೆ.

ಡಾ.ಬಿ.ಆರ್.ಅಂಬೇಡ್ಕರ್ ಅವರು ಪಂಡಿತ ಜವಾಹರಲಾಲ್ ನೆಹರು ಸರ್ಕಾರದ ಕಾನೂನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಿಜವಾದ ಕಾರಣಗಳನ್ನು ತಿರುಚಿ ವಿವಾದಿಸುವ ಮೂಲಕ ಕೇಂದ್ರ ಗೃಹ ಸಚಿವರು ರಾಜ್ಯಸಭೆಯನ್ನು ತಪ್ಪಾಗಿ ದಾರಿ ತೋರಿಸಿದ್ದಾರೆ ಎಂಬುದು ನಮಗೆ ಸ್ಪಷ್ಟವಾಗಿದೆ. ಡಾ.ಅಂಬೇಡ್ಕರ್ ಅವರ ರಾಜೀನಾಮೆಗೆ ನಿಜವಾದ ಕಾರಣ, ಹಿಂದೂ ಕೋಡ್ ಬಿಲ್ ಅನ್ನು ಸಂಸತ್ತಿನಲ್ಲಿ ಪಾಸು ಮಾಡಲು ಸೂಕ್ತ ಬೆಂಬಲದ ಕೊರತೆಯೇ, ಎಂಬುದು ಅಸಂದಿಗ್ಧ ಸತ್ಯವಾಗಿದೆ. ಹೀಗಾಗಿ ರಾಷ್ಟಪತಿಗಳಾದ ತಾವು ನಿಮ್ಮ ಗೌರವಾನ್ವಿತ ಸ್ಥಾನದಿಂದ ಕೇಂದ್ರ ಗೃಹ ಸಚಿವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಭವಿಷ್ಯದಲ್ಲಿ ಇಂತಹ ಪ್ರಕಾರದ ಅಪಸ್ವರಗಳ ಮತ್ತು ಅಸಹ್ಯ ಹೇಳಿಕೆಗಳ ತಡೆಯುವತ್ತ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನ್ಯಾಯವಾದಿ ಸಂಘದ ಅಧ್ಯಕ್ಷ ಕಮಲ್ ವಿ.ರಾಠೋಡ, ಕಾರ್ಯದರ್ಶಿ ಬಿ.ಟಿ.ಸಿಂಧೆ, ದೇವಾನಂದ ಹೋದಲೂರಕರ್, ಬಿ.ಐ.ಶಿರೋಳೆ, ಎಸ್.ಡಿ.ಬೋಸಗೆ, ಸಿ.ಎ.ತೋಳೆ, ಮಹಾದೇವ ಹತ್ತಿ, ಬಿ.ಜಿ.ಬೀಳಗಿ, ಶ್ರೀಮಂತ ನಡಗೇರಿ, ಮಲ್ಲಿಕಾರ್ಜುನ ಕೆ. ರಮೇಶ ಎಂ.ತೋಳೆ, ಶಾಂತಪ್ಪ ಬೋಳಣಿ, ಎಸ್.ಬಿ. ಪಡಶೆಟ್ಟಿ, ಸ್ವಾಮಿರಾವ್ ಚನ್ನಗುಂಡ, ನಾಗರಾಜ ದೇಕುನ್, ಯು.ಕೆ. ಇನಾಮದಾರ, ಗೀತಾ ಪಾಟೀಲ, ಸುನಿತಾ ಗಡಬಳಿ, ನಾಡಕರ್, ಶರಣಬಸಪ್ಪ ಗಡಬಳಿ, ಸಂಗಣ್ಣ ಕೆರಮಗಿ, ಶಿವಲಿಂಗಪ್ಪ ಜಮಾದಾರ, ಭರತೇಶ ಕಸ್ತೂರೆ, ಕೆ.ಯು. ಇನಾಮದಾರ ಸೇರಿದಂತೆ ಹಿರಿಯ ಕಿರಿಯ ವಕೀಲರು ಪಾಲ್ಗೊಂಡಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News