ಕಲಬುರಗಿ ಕಸಾಪದಿಂದ ಎ. ರಂದು 11 ರಂದು ಭೀಮ ಜ್ಞಾನ ಯಾನ ಕುರಿತು ವಿಚಾರ ಸಂಕಿರಣ

ವಿಜಯಕುಮಾರ ಪಾಟೀಲ ತೇಗಲತಿಪ್ಪಿ
ಕಲಬುರಗಿ: ಸಮಸಮಾಜದ ನಿರ್ಮಾಣಕ್ಕೆ ಸಂವಿಧಾನದ ಮೂಲಕ ಭದ್ರ ಬುನಾದಿ ಹಾಕಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಡಿಯಲ್ಲಿ ತಿಂಗಳಪರ್ಯಂತ ವೈವಿಧ್ಯಮಯವಾಗಿರುವ ವೈಚಾರಿಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮಗಳ ಮಾಹಿತಿ ನೀಡಿದ ತೇಗಲತಿಪ್ಪಿ, ಶೋಷಿತ ಸಮುದಾಯದ ವಿಮೋಚನೆಗಾಗಿ ತಮ್ಮ ಜೀವನವೇ ತ್ಯಾಗ ಮಾಡಿ ಸಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ ಡಾ. ಅಂಬೇಡ್ಕರ್ ರವರನ್ನು ಸ್ಮರಿಸಿ ಅವರ ಚಿಂತನೆಗಳನ್ನು ಇಂದಿನ ಹೊಸ ಪೀಳಿಗೆಗೆ ಮುಟ್ಟಿಸುವ ಕಾರ್ಯಕ್ರಮ ಇದಾಗಿದೆ ಎಂದರು.
ಇದರ ಭಾಗವಾಗಿ 11 ರಂದು ಬೆಳಗ್ಗೆ 10.45 ಕ್ಕೆ ನಗರದ ಎಸ್.ಟಿ.ಬಿ.ಟಿ. ಕ್ರಾಸ್ ಹತ್ತಿರವಿರುವ ನಾಗಾಂಬಿಕಾ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಭೀಮ ಜ್ಞಾನ ಯಾನ ಎಂಬ ಮಹಾಘೋಷವಾಕ್ಯದಡಿ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದ್ದು, ಪತ್ರಕರ್ತ ಮಹೇಶ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾಲೇಜಿನ ಪ್ರಿನ್ಸಿಪಾಲ್ ಡಾ. ಅರವಿಂದಕುಮಾರ ಬಿರಾದಾರ ಅಧ್ಯಕ್ಷತೆ ವಹಿಸಲಿದ್ದಾರೆ. ಮಹಿಳಾ ಏಳ್ಗೆ-ಅಂಬೇಡ್ಕರ್ ಚಿಂತನೆ ಕುರಿತು ಡಾ. ಜಯದೇವಿ ಗಾಯಕವಾಡ, ಸಾಮಾಜಿಕ ಸಮಾನತೆ-ಅಂಬೇಡ್ಕರ್ ಧೋರಣೆ ಕುರಿತು ಡಾ. ಜಗನ್ನಾಥ ಎಲ್ ತರನಳ್ಳಿ, ಸಂವಿಧಾನ ತತ್ವ-ಶರಣ ತತ್ವ ಕುರಿತು ಪ್ರೊ. ಸಂಜಯ ಮಾಕಲ್ ಅವರು ವಿಚಾರ ಮಂಡನೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದರು.
13 ರಂದು ಬೆಳಗ್ಗೆ 11.15 ಕ್ಕೆ ನಗರದ ಕನ್ನಡ ಭವನದಲ್ಲಿ ಭೀಮ ಕಾವ್ಯ ಜ್ಞಾನ ಎಂಬ ವಿಶೇಷ ಕವಿಗೋಷ್ಠಿಯೊಂದನ್ನು ಆಯೋಜಿಸಲಾಗಿದ್ದು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸಾಹಿತಿ ಡಾ. ಹನುಮಂತರಾವ ಬಿ ದೊಡ್ಡಮನಿ ಉದ್ಘಾಟಿಸಲಿದ್ದು, ಹಿರಿಯ ಲೇಖಕ ಈಶ್ವರ ಕಟ್ಟಿಮನಿ ಅಧ್ಯಕ್ಷತೆ ವಹಿಸಲಿದ್ದಾರೆ. ಜನಪರ ಹೋರಾಟಗಾರ ಶ್ರವಣಕುಮಾರ ಡಿ ನಾಯಕ್, ಸಾಮಾಜಿಕ ಚಿಂತಕಿ ಜ್ಯೋತಿ ಮರಗೋಳ, ವೀರಶೈವ ಲಿಂಗಾಯತ ಮಹಾವೇದಿಕೆಯ ಜಿಲ್ಲಾಧ್ಯಕ್ಷ ಶ್ರೀಧರ ಎಂ. ನಾಗನಹಳ್ಳಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಜಿಲ್ಲೆಯ ಇಪ್ಪತ್ತೈದು ಜನ ಕವಿಗಳು ಪ್ರಚಲಿತ ವಿದ್ಯಮಾನಗಳ ಮೇಲೆ ಕವನ ವಾಚಿಸಲಿದ್ದಾರೆ.
ಇದೇ ರೀತಿಯಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ನಿಂದಲೂ ಡಾ. ಅಂಬೇಡ್ಕರ್ ರವರ ಜಯಂತಿಯ ವಿಶೇಷ ಕಾರ್ಯಕ್ರಮಗಳು ಆಯೋಜಿಸುವಂತೆ ತಾಲೂಕಾಧ್ಯಕ್ಷರಿಗೆ ಸೂಚಿಸಲಾಗಿದೆ.
ಡಾ. ಅಂಬೇಡ್ಕರ್ ರವರು ಕಂಡ ಪ್ರಬುದ್ಧ ಭಾರತ ನಿರ್ಮಾಣ, ಸಮಸಮಾಜ, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನದ ಆಶಯಗಳ ಜತೆಗೆ ಅವರು ಪ್ರತಿಪಾದಿಸಿದ ಮೌಲ್ಯಗಳ ಬಗ್ಗೆ ಚಿಂತನ-ಮಂಥನ ನಡೆಸಲಾಗುತ್ತಿದ್ದು, ಇಂದಿನ ಸಮಾಜದಲ್ಲಿ ಸಾಮರಸ್ಯ ಭಾವನೆ ಮೂಡಿಸಲು ಕನ್ನಡ ಸಾಹಿತ್ಯ ಪರಿಷತ್ತು ಇಂಥ ಅನೇಕ ವೈವಿಧ್ಯಮಯ ಮತ್ತು ವಿಭಿನ್ನ ಪ್ರಯೋಗದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ ಎಂದು ವಿವರಿಸಿದರು.
ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್. ಧನ್ನಿ, ರಾಜೇಂದ್ರ ಮಾಡಬೂಳ, ಎಂ.ಎನ್. ಸುಗಂಧಿ, ಸಂತೋಷ ಕುಡಳಿ, ರಮೇಶ ಡಿ ಬಡಿಗೇರ, ಧರ್ಮರಾಜ ಜವಳಿ ಇತರರಿದ್ದರು.