ಎ.11ರಂದು ದೇವಸ್ಥಾನದ ಪೂಜೆಯ ಹಕ್ಕು ನೀಡುವಂತೆ ಆಗ್ರಹಿಸಿ ʼಮೇಳಕುಂದಿ ಚಲೋʼ

ಕಲಬುರಗಿ: ಕಲಬುರಗಿ ತಾಲೂಕಿನ ಮೇಳಕುಂದಾ (ಬಿ) ಗ್ರಾಮದಲ್ಲಿ ಪುರಾತನವಾದ ಮಾಳಿಂಗರಾಯ ದೇವಸ್ಥಾನದ ಪೂಜೆಯ ಕಾರ್ಯಗಳ ಹಕ್ಕನ್ನು ವಂಶಸ್ಥರನ್ನು ಕೊಡುವಂತೆ ಆಗ್ರಹಿಸಿ, ಇದೇ ಎ.11ರಂದು ಮೇಳಕುಂದಿ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಗುರುನಾಥ್ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಳಕುಂದಾ (ಬಿ) ಗ್ರಾಮದಲ್ಲಿರುವ ಮಾಳಿಂಗರಾಯ ದೇವಸ್ಥಾನವು ಕಂದಾಯ ಇಲಾಖೆಯ ಜಮಾಬಂದಿ ಪತ್ರಿಕೆ 1320 ಫಸಲಿ ಪ್ರಕಾರ ಮಾಳದೇವ ದೇವಸ್ಥಾನ ಇದರ ವಾರಸುದಾರ ಮುತ್ತಪ್ಪ ಧನಗರ ಎಂದು ಇದೆ, ಕಂದಾಯ ಇಲಾಖೆಯ ಸರ್ವೇ 114 ಪಹಣಿ ಹಾಗೂ ಕಬ್ಜೆ ಕುರುಬರ ಹೆಸರಿನಲ್ಲಿದೆ. ಅಲ್ಲದೆ ಇನಾಮ ಪತ್ರಿಕೆಯಲ್ಲಿ 29 ಎಕರೆ 34 ಗುಂಟೆ ದೇವಸ್ಥಾನಕ್ಕೆ ಮಂಜೂರು ಆಗಿರುವುದು ಉಲ್ಲೇಖವಿದೆ. ಆದರೂ ನಮ್ಮ ಬಲಿಷ್ಠ ಲಿಂಗಾಯತ ಜನರು ನಮ್ಮ ದೇವಸ್ಥಾನದ ಪೂಜೆ ಮಾಡಲು ಬಿಡುತ್ತಿಲ್ಲ, ಧಮ್ಕಿ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ದೇವಸ್ಥಾನದ ಗದ್ದುಗೆಯ ಪೂಜೆಯನ್ನು ಕುರುಬ ಪೂಜಾರಿಗಳಿಗೆ ವಹಿಸಬೇಕೆಂದು ಕಳೆದ ಜನವರಿಯಲ್ಲಿ ಪ್ರತಿಭಟಿಸಿದ್ದೆವು, 15 ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಅಪರ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಈವರೆಗೆ ಅವರು ಒಂದು ಸಭೆಯೂ ಮಾಡಿಲ್ಲ ಎಂದು ಆರೋಪಿಸಿದ ಅವರು, ಅಧಿಕಾರಿಗಳ ನಡೆಯನ್ನು ಖಂಡಿಸಿದರು.
2 ತಿಂಗಳು ಕಳೆದರೂ ನಮ್ಮ ಬೇಡಿಕೆ ಈಡೇರಿಸಿಲ್ಲ, ಹಾಗಾಗಿ ಇದನ್ನೆಲ್ಲ ಖಂಡಿಸಿ, ನಾವು ಮೇಳಕುಂದಿ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ, ಅದೇ ದಿನದಂದು ಕಲಬುರಗಿ ಹೈಕೋರ್ಟ್ ಕ್ರಾಸ್ ನಿಂದ ವಾಹನಗಳು ತೆರಳಲಿದ್ದು, ಮೇಳಕುಂದ ಗ್ರಾಮದ ಅಂಬೇಡ್ಕರ್ ಕ್ರಾಸ್ ನಿಂದ ಮಾಳಿಂಗರಾಯ ದೇವಸ್ಥಾನದ ವರೆಗೆ ಭವ್ಯ ಮೆರವಣಿಗೆ ಸಾಗಲಿದೆ. ಬಳಿಕ ದೇವಸ್ಥಾನದ ಗದ್ದುಗೆಗೆ ಮಹಾಭಿಷೇಕ, ವಿಶೇಷ ಪೂಜೆ ನೆರವೇರಲಿದೆ ಎಂದರು.
ಚಲೋ ಕಾರ್ಯಕ್ರಮದಲ್ಲಿ ಜಿಲ್ಲೆಯ ಕುರುಬ ಸಮುದಾಯದ 5 ಸಾವಿರಕ್ಕೂ ಹೆಚ್ಚಿನ ಮಂದಿ ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಲಕ್ಕವಳ್ಳಿ ಮಂಜುನಾಥ್, ನಿರ್ಮಲಾ ಬರಗಾಲಿ, ಕುಪೇಂದ್ರ ಬರಗಾಲಿ, ರಮೇಶ್ ಕನ್ನಗೊಂಡ, ಗಣಪತಿ ಮಿಣಜಗಿ, ಮಹದೇವಪ್ಪ ಮುತ್ಯಾ, ರವಿಗೊಂಡ ಕಟ್ಟಿಮನಿ, ನಾಗೇಂದ್ರಪ್ಪ ಪೂಜಾರಿ ಸೇರಿದಂತೆ ಮತ್ತಿತರರು ಇದ್ದರು.