ಕಲಬುರಗಿ | ರಾಷ್ಟ್ರಕೂಟ ಉತ್ಸವ : ವಿವಿಧ ಸಾಧಕರಿಗೆ ಕಲ್ಯಾಣ ರತ್ನ ಪ್ರಶಸ್ತಿ ಪ್ರದಾನ

ಕಲಬುರಗಿ : ಕಲ್ಯಾಣ ನಾಡು ವಿಕಾಸ ವೇದಿಕೆ ವತಿಯಿಂದ ಕಲಬುರಗಿ ನಗರದ ಕನ್ನಡ ಭವನದಲ್ಲಿ 2ನೇ ವರ್ಷದ ರಾಷ್ಟ್ರಕೂಟ ಉತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಪೂಜ್ಯ ಚಿರಂಜೀವಿ ಎಸ್ ಅಪ್ಪ ಅವರು ವಹಿಸಿದ್ದು, ಉದ್ಘಾಟನೆಯನ್ನು ಶರಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಪತ್ರಕರ್ತ ರಾಮಕೃಷ್ಣ ಬಡಶೇಶಿ, ಸಾಹಿತಿ ಡಾ.ಹನುಮಂತರಾವ ದೊಡ್ಡಮನಿ ಆಗಮಿಸಿದ್ದರು.
ವೇದಿಕೆ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್ ನಡಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೋಟಿ ಕೋಟಿ ಖರ್ಚು ಮಾಡಿ ಮೈಸೂರು ದಸರಾ ಹಬ್ಬ, ಹಂಪಿ ಉತ್ಸವ, ಚಾಲುಕ್ಯ ಉತ್ಸವ, ಕಿತ್ತೂರು ಉತ್ಸವ, ಕದಂಬ ಉತ್ಸವ, ಲಕ್ಕುಂಡಿ ಉತ್ಸವ ಮಾಡುವ ರಾಜ್ಯ ಸರ್ಕಾರವು ರಾಷ್ಟ್ರಕೂಟ ಉತ್ಸವ ಮಾಡದೇ ಇರುವುದಕ್ಕೆ ಕಾರಣಗಳನ್ನು ನಮ್ಮ ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು
ಅಧ್ಯಕ್ಷತೆ ವಹಿಸಿ ಮಾತನಾಡಿದ ಹೋರಾಟಗಾರ ಡಾ.ಲಕ್ಷ್ಮಣ ದಸ್ತಿ, ರಾಷ್ಟ್ರಕೂಟರು ಸುಮಾರು 300 ವರ್ಷಗಳ ಕಾಲ ಆಳ್ವಿಕೆ ಮಾಡಿದ್ದು, ಸಾಮ್ರಾಜ್ಯ ವ್ಯಾಪ್ತಿಯು ಉತ್ತರದಲ್ಲಿ ಕಾಶ್ಮೀರದಿಂದ, ದಕ್ಷಿಣದಲ್ಲಿ ಶ್ರೀಲಂಕಾ ವರೆಗೂ ಮತ್ತು ಪೂರ್ವದಲ್ಲಿ ಬಂಗಾಳದಿಂದ ಪಶ್ಚಿಮದಲ್ಲಿ ಗುಜರಾತ ವರೆಗೂ ಇತ್ತು. ರಾಷ್ಟ್ರಕೂಟರಲ್ಲಿ 3ನೇ ಗೋವಿಂದ ಮತ್ತು ವಿಶ್ವದಲ್ಲಿ 64 ವರ್ಷ ಕಾಲ ಆಳ್ವಿಕೆ ಮಾಡಿದ ಏಕೈಕ ಅರಸ ಚಕ್ರವರ್ತಿ ಅಮೋಘವರ್ಷನೃಪತುಂಗರು ಪ್ರಬಲ ಅರಸರಾಗಿದ್ದರು. ರಾಷ್ಟ್ರಕೂಟರ ಕಾಲದಲ್ಲಿ ಕಲೆ ವಾಸ್ತುಶಿಲ್ಪ, ಶಿಕ್ಷಣ, ಸಾಹಿತ್ಯ, ಆಡಳಿತ, ಆರ್ಥಿಕತೆ ಮತ್ತು ಸರ್ವ ಧರ್ಮ ಸಹಿಷ್ಣುತೆ ಇತ್ತು. ಇವರ ಕಾಲದ ಅಜಂತಾ, ಎಲ್ಲೋರಾ ಮತ್ತು ಎಲಿಪೆಂಟಾ ಸ್ಮಾರಕಗಳು ಯುನೆಸ್ಕೊ ಮಾನ್ಯತೆ ಪಡೆದಿವೆ, ಆದರೆ ಅವರ ರಾಜಧಾನಿಯಾಗಿ ಮೆರೆದ ಮಳಖೇಡದ ಸ್ಥಿತಿ ಶೋಚನಿಯವಾಗಿದೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಚಲನಚಿತ್ರ ಕ್ಷೆತ್ರದಲ್ಲಿ ರಾಘವಿ ಅರಳಗುಂಡಗಿ, ಸಾಹಿತ್ಯ ಕ್ಷೇತದಲ್ಲಿ ಡಾ.ಬಸವರಾಜ ಕೊನೇಕ, ಮಾಧ್ಯಮ ಕ್ಷೇತ್ರದಲ್ಲಿ ಶೇಷಮೂರ್ತಿ ಅವಧಾನಿ, ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ಶರಣಯ್ಯ ಹಿರೇಮಠ, ಕಾನೂನು ಕ್ಷೇತ್ರದಲ್ಲಿ ನಾಗೇಂದ್ರ ಜವಳಿ, ಪೊಲೀಸ ಇಲಾಖೆಯಲ್ಲಿ ಯಲ್ಲಪ್ಪ ತಳವಾರ, ಹೋರಾಟಗಾರ ಕ್ಷೇತ್ರದಲ್ಲಿ ಸೋಮನಾಥ ಕಟ್ಟಿಮನಿ, ಕೃಷಿ ಕ್ಷೇತ್ರದಲ್ಲಿ ಶರಣಬಸಪ್ಪ ಪಾಟೀಲ, ಜಾನಪದ ಕ್ಷೇತ್ರದಲ್ಲಿ ಎಂ.ಬಿ.ನಿಂಗಪ್ಪ, ಸಮಾಜ ಸೇವೆಯಲ್ಲಿ ಅಸ್ಲಮ ಚೋಗೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷ ಬಾಬು ಮದನಕರ, ಸಂಘಟಕರಾದ ಜೈಭೀಮ ಮಾಳಗೆ, ಮೋಹನ್ ಸಾಗರ, ಪ್ರವೀಣ ಖೇಮನ, ವಿಜಯಕುಮಾರ ಕಂಬಾರ, ದೇವು ದೊರೆ, ಶ್ರೀಶೈಲ ಪೂಜಾರಿ, ಮಲ್ಲು ಸಂಕನ, ರಾಣೇಶ ಸಾವಳಗಿ ರಾಕೇಶ ಕೊರವಾರ ಸಂಘಟನೆಯ ಪಧಾಧಿಕಾರಿಗಳು ಇದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕ ಪಂಡಿತ ಮದಗುಣಕಿ, ಸ್ವಾಗತ ನಾಗು ಡೊಂಗರಗಾಂವ ಮತ್ತು ಮಲ್ಲು ದೊರೆ ವಂದಿಸಿದರು.