ಕಲಬುರಗಿ | ಮೂಲಭೂತ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ಅಗತ್ಯ : ತಿಪ್ಪಣ್ಣಾ ಒಡೆಯರಾಜ

ಕಲಬುರಗಿ : "ಭೋವಿ ವಡ್ಡರ ಸಮಾಜ ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಅತೀ ಹಿಂದುಳಿದ ಸ್ಥಿತಿಯಲ್ಲಿದೆ. ಆದರೆ, ಸರಕಾರ ಜಾರಿಗೆ ತರಲು ಹೊರಟಿರುವ 'ಒಳ ಮೀಸಲಾತಿ' ಕ್ರಮ ಈ ಸಮಾಜಕ್ಕೆ ದುಃಖದಾಯಕವಾಗಲಿದೆ. ಹೀಗಾಗಿ, ಎಲ್ಲರೂ ಸಂಘಟಿತವಾಗಿ ಹೋರಾಟಕ್ಕೆ ಸಜ್ಜಾಗಬೇಕು" ಎಂದು ಜಿಲ್ಲೆ ಭೋವಿ ವಡ್ಡರ ಸಮಾಜದ ಮಾಜಿ ಅಧ್ಯಕ್ಷ ತಿಪ್ಪಣ್ಣಾ ಒಡೆಯರಾಜ ಹೇಳಿದರು.
ಆಳಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಮಾಜದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ಅವರು ಮಾತನಾಡಿದರು. “ಭೋವಿ ವಡ್ಡರ ಜನರು ತಮ್ಮ ಪರಂಪರೆಯ ಉದ್ಯೋಗವನ್ನು ಕಳೆದುಕೊಂಡು, ಗ್ರಾಮಾಂತರ ಪ್ರದೇಶಗಳಿಂದ ನಗರಗಳಿಗೆ ವಲಸೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಇದರ ಪರಿಣಾಮವಾಗಿ ಮಕ್ಕಳ ಶಿಕ್ಷಣ ಸಹ ಹಿನ್ನಡೆಯಾಗಿದೆ. ಆದರೂ, ಸರ್ಕಾರ ಈ ಜನಾಂಗದ ಬಗ್ಗೆ ಕಿಂಚಿತ್ ಕಾಳಜಿ ವಹಿಸುತ್ತಿಲ್ಲ. ತಕ್ಷಣವೇ ವಲಸೆ ತಡೆಯಲು ಪರ್ಯಾಯ ಉದ್ಯೋಗ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.
ಆಳಂದ ತಾಲೂಕು ಭೋವಿ ವಡ್ಡರ ಸಮಾಜದ ಅಧ್ಯಕ್ಷ ಭೀಮಣ್ಣಾ ಬನ್ನಪಟ್ಟಿ, ಮುಖಂಡರಾದ ಈರಣ್ಣಾ ಹಳಕಟ್ಟಿ, ಸಿದ್ರಾಮ ದಂಡಗೂಲಕರ್, ಭೀಮಾಶಂಕರ ಬಂಕೂರ, ಅರ್ಜುನ ಬಂಡೆ, ಸುಭಾಷ ಬನ್ನಪಟ್ಟಿ, ಶ್ರೀಹರಿ ಜಾಧವ, ಪ್ರಭು ಬಂಡಿ, ಅಂಬಣ್ಣಾ ಚವ್ಹಾಣ್, ಕನಕಪ್ಪ ಬಂಡಿ ಮುಂತಾದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.