ಕಲಬುರಗಿ | ಜನಪದ ಪರಂಪರೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ : ಡಾ.ಪ್ರೇಮಿಳಾ

ಕಲಬುರಗಿ: "ಆಧುನಿಕತೆಯ ಭರಾಟೆಯಲ್ಲಿ ಜನಪದ ಪರಂಪರೆ ಮರೆಯಲ್ಪಡುವ ಅಪಾಯವಿದೆ. ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ" ಎಂದು ಅಮತಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಡಾ.ಪ್ರೇಮಿಳಾ ಅಂಬಾರಾಯ ಹೇಳಿದರು.
ಆಳಂದ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನನಿಂದ ಹಮ್ಮಿಕೊಂಡ ನಮ್ಮ ಸಂಸ್ಕೃತಿ – ನಮ್ಮ ಹೆಮ್ಮೆ ಘೋಷವಾಕ್ಯದೊಂದಿಗೆ ಕಾಲೇಜಿನಲ್ಲಿ ಆಯೋಜಿಸಿದ್ದ ಜನಪದ ಉತ್ಸವದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು.
“ರಾಜ್ಯಾದ್ಯಂತ ಸರಕಾರಿ ಪದವಿ ಕಾಲೇಜುಗಳಲ್ಲಿ ಜನಪದ ಉತ್ಸವಗಳನ್ನು ಆಯೋಜಿಸುವ ಮೂಲಕ ಸರಕಾರ ಸಾಂಪ್ರದಾಯಿಕ ಜನಪದ ಕಲಾ ಪ್ರಕಾರಗಳಿಗೆ ಪುನರುಜ್ಜೀವನ ನೀಡುತ್ತಿರುವುದು ಶ್ಲಾಘನೀಯ. ಯಾಂತ್ರಿಕತೆಯ ಪ್ರಭಾವದಿಂದ ಜನಪದ ಸಂಸ್ಕೃತಿ ಹಿಮ್ಮೆಟ್ಟುತ್ತಿದೆ. ಇಂಥ ಉತ್ಸವಗಳು ಯುವ ಪೀಳಿಗೆಯ ಜನಪದ ಸಂಸ್ಕೃತಿಯ ಅರಿವು ಮತ್ತು ಮೆಚ್ಚುಗೆ ಹೆಚ್ಚಿಸಲು ಉತ್ತಮ ವೇದಿಕೆಯಾಗುತ್ತವೆ" ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಧ್ಯಾಪಕ ಡಾ.ರವಿಚಂದ್ರ ಕಂಟೆಕುರೆ ಮಾತನಾಡಿ, ಈ ಉತ್ಸವಗಳು ವಿದ್ಯಾರ್ಥಿಗಳಲ್ಲಿ ಜನಪದ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಗೌರವ ಹಾಗೂ ಆಸಕ್ತಿ ಬೆಳೆಸಲು ನೆರವಾಗುತ್ತವೆ. ಮುಂದಿನ ಪೀಳಿಗೆಗೆ ಈ ಪರಂಪರೆಯನ್ನು ಉಳಿಸುವ ಜವಾಬ್ದಾರಿ ನಮ್ಮದಾಗಿದೆ" ಎಂದು ಹೇಳಿದರು.
ವೇದಿಕೆಯಲ್ಲಿ ಡಾ.ರಮೇಶ ಮಾಳಗೆ, ಡಾ.ಅರವಿಂದ ಭದ್ರಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಸಾಂಪ್ರದಾಯಿಕ ಜನಪದ ಉಡುಪುಗಳಲ್ಲಿ ಭಾಗವಹಿಸಿ ಉತ್ಸವಕ್ಕೆ ಜೋಶ್ ನೀಡಿದರು. ಮಹಾದೇವ ಮೋಘಾ, ನಾಗಮೂರ್ತಿ ಬಡಿಗೇರ, ಡಾ.ದೊಂಡಿಬಾ ನಿಕ್ಕಂ ಇವರು ಡೊಳ್ಳು ಬಾರಿಸಿ ನೃತ್ಯ ಪ್ರದರ್ಶನ ನೀಡಿ ಗಮನ ಸೆಳೆದರು.
ಡಾ.ಶಿವಪ್ಪ ಭೂಸನೂರ ಸ್ವಾಗತ ಭಾಷಣ ನೀಡಿದರು, ಪ್ರೊ.ಗೀತಾ ನಿರೂಪಣೆ ನಡೆಸಿದರು ಮತ್ತು ಉಪನ್ಯಾಸಕ ರಾಜಶೇಖರ ಪಾಟೀಲ ವಂದಿಸಿದರು.