ಕಲಬುರಗಿ-ಬೆಂಗಳೂರು ವಿಮಾನ ಸೇವೆಯಲ್ಲಿ ವ್ಯತ್ಯಯ
ಕಲಬುರಗಿ, ನ.12: ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಪ್ರಯಾಣದಲ್ಲಿ ಒಂದಿಲ್ಲೊಂದು ಬರ ಕಾಡುತ್ತಿರುವ ಬೆನ್ನಲ್ಲೇ ಇದೀಗ ವಿಮಾನ ಪ್ರಯಾಣಿಕರಿಗೂ ಸಂಕಷ್ಟ ಎದುರಾಗಿದೆ. ಕಲಬುರಗಿ-ಬೆಂಗಳೂರು ಮಧ್ಯೆ ದಿನನಿತ್ಯ ಹಾರಾಟ ನಡೆಸುತ್ತಿರುವ ವಿಮಾನ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಹೌದು, ಪ್ರತೀದಿನ ಕಲಬುರಗಿಯಿಂದ ಬೆಂಗಳೂರಿಗೆ ಸೇವೆ ನೀಡುತ್ತಿದ್ದ ಸ್ಟಾರ್ ಏರ್ಲೈನ್ಸ್ ವಾರದಲ್ಲಿ 4 ದಿನಗಳ ಸೇವೆಯನ್ನು ಕಡಿತಗೊಳಿಸಿದೆ. ಹಾಗಾಗಿ ರವಿವಾರ, ಸೋಮವಾರ ಮತ್ತು ಮಂಗಳವಾರ ವಿಮಾನ ಹಾರಾಟ ನಡೆಸಲಿದೆ. ಆದ್ದರಿಂದ ಉಳಿದ ದಿನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಟಿಕೆಟ್ ಸಿಗುವುದಿಲ್ಲ. ಬುಧವಾರ, ಗುರುವಾರ, ಗುರುವಾರ ಮತ್ತು ಶುಕ್ರವಾರದಂದು ಪ್ರಯಾಣಿಸುವವರಿಗೆ ಟಿಕೆಟ್ ಲಭ್ಯವಿರುವುದಿಲ್ಲ.
ಕಲಬುರಗಿ-ಬೆಂಗಳೂರು ಮಾರ್ಗದ ದಿನನಿತ್ಯದ ವಿಮಾನ ಸೇವೆಯನ್ನು ದಿಢೀರ್ ರದ್ದುಪಡಿಸಿ, ಮಹಾರಾಷ್ಟ್ರದ ಕೊಲ್ಹಾಪುರ- ಅಹ್ಮದಾಬಾದ್ ಮತ್ತು ನಾಂದೇಡ್ನಿಂದ ಅಹ್ಮದಾಬಾದ್ ಮಾರ್ಗವಾಗಿ 2 ಕಡೆ ಹೊಸ ಏರ್ಲೈನ್ಸ್ ಪ್ರಾರಂಭಿಸಲಾಗುತ್ತಿದೆ. ಇದೇ ಕಾರಣಕ್ಕೆ ಕಲಬುರಗಿಯಿಂದ ಬೆಂಗಳೂರಿಗೆ ಹೊರಡುವ ವಿಮಾನ ಸೇವೆಯಲ್ಲಿ ಕಡಿತಗೊಳಿಸಲಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
52 ಆಸನಗಳ ಸಾಮರ್ಥ್ಯದ ಸ್ಟಾರ್ ವಿಮಾನವು ದಿನನಿತ್ಯ 3,900 ರಿಂದ 4,000 ರೂ.ವರೆಗಿನ ದರದಲ್ಲಿ ಸೇವೆ ನೀಡುತ್ತದೆ. ಮತ್ತು ವಾರಾಂತ್ಯದಲ್ಲಿ (ಶುಕ್ರವಾರದಿಂದ ರವಿವಾರ) 5,000ರಿಂದ 6,000 ದರದಲ್ಲಿ ಟಿಕೆಟ್ ಸಿಗುತ್ತದೆ. ಹಾಗಾಗಿ ಈ ಮಾರ್ಗವು ವಿಮಾನ ಸಂಸ್ಥೆಗೆ ಉತ್ತಮ ಲಾಭದಾಯಕ. ಸಿಮೆಂಟ್ ಕಾರ್ಖಾನೆ, ಮೆಡಿಕಲ್-ಇಂಜಿನಿಯರಿಂಗ್ ವಿದ್ಯಾಭ್ಯಾಸ, ಸೆಂಟ್ರಲ್ ಯುನಿವರ್ಸಿಟಿ, ಪ್ರವಾಸೋದ್ಯಮ, ವ್ಯಾಪಾರ-ವಹಿವಾಟಿಗೆ, ಇತರ ಖಾಸಗಿ ಕಂಪೆನಿಗಳ ಸಿಬ್ಬಂದಿ ಈ ಮಾರ್ಗದಲ್ಲಿ ದಿನನಿತ್ಯ ಪ್ರಯಾಣಿಸುತ್ತಾರೆ.
ಕಲಬುರಗಿ-ಬೆಂಗಳೂರು ಮಾರ್ಗದ ವಿಮಾನ ಸೇವೆ ಕಳೆದ ಬಾರಿ ಇದೇ ರೀತಿ ವ್ಯತ್ಯಯ ಮಾಡಲಾಗಿತ್ತು. ಸಚಿವ, ಸಂಸದರ ಒತ್ತಾಯದಿಂದ ವಿಮಾನ ಸೇವೆ ಮತ್ತೆ ಪ್ರಾರಂಭವಾಯಿತು. ಈಗ ಅದೇ ರೀತಿ ಈ ತಿಂಗಳಲ್ಲಿ ವಾರದ ಸೇವೆ ಕಡಿತಗೊಳಿಸಿ, ಕ್ರಮೇಣ ಈ ಭಾಗಕ್ಕೆ ಸೇವೆಯನ್ನು ಸ್ಥಗಿತಗೊಳಿಸುವ ಹುನ್ನಾರ ನಡೆಯುತ್ತಿದೆ. ಹಾಗಾಗಿ ಈ ಭಾಗದ ಸಚಿವರು, ಸಂಸದರು ಉಳಿದ ಅಧಿಕಾರಿಗಳು ಸೇವೆಯನ್ನು ಸ್ಥಗಿತಗೊಳಿಸದಂತೆ ಒತ್ತಾಯಿಸಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಕಲಬುರಗಿ-ತಿರುಪತಿ ವಿಮಾನ ಸೇವೆ ಸ್ಥಗಿತವಾಗಿದೆ. ಇದೀಗ ಈ ಸೇವೆಯೂ ಸ್ಥಗಿತಕ್ಕೆ ಷಡ್ಯಂತ್ರ ನಡೆಯುತ್ತಿದೆ ಎನ್ನುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಕಲ್ಯಾಣ ಕರ್ನಾಟಕ ಪ್ರಯಾಣಿಕರಿಗೆ ಅನುಕೂಲ
ದಿನನಿತ್ಯ ಕಲಬುರಗಿಯಿಂದ ಬೆಂಗಳೂರಿಗೆ ಪ್ರಯಾಣಿಸುವ ಈ ಭಾಗದ ಉದ್ಯಮಿ, ನೌಕರರಿಗೆ ಸೇರಿದಂತೆ ಇತರ ಪ್ರಯಾಣಿಕರಿಗೆ ಭಾರೀ ಅನುಕೂಲವಾಗಿದೆ. ಹಾಗಾಗಿ ಬೀದರ್, ಯಾದಗಿರಿ, ರಾಯಚೂರು, ಗುರುಮಿಟ್ಕಲ್ ಭಾಗದವರು ಕಲಬುರಗಿ ವಿಮಾನ ನಿಲ್ದಾಣವನ್ನೇ ಅವಲಂಬಿಸಿದ್ದಾರೆ.
ತಾಂತ್ರಿಕ ಸಮಸ್ಯೆಯಿಂದ ವಿಮಾನ ಸೇವೆ ರದ್ದಾಗಿದೆ ಎಂದು ತಿಳಿದಿದೆ. ಇದು ಖಾಸಗಿ ವಿಮಾನ ಸಂಸ್ಥೆಯಾಗಿದ್ದರಿಂದ ಇದಕ್ಕೆ ಕೇಂದ್ರ ಸರಕಾರ ಒತ್ತಡ ಹಾಕಬೇಕು. ಬೇರೆಡೆಯಂತೆ ನಮ್ಮಲ್ಲಿ ಸೇವೆ ಬಂದ್ ಮಾಡದೆ, ಹೊಸ ವಿಮಾನ ಸೇವೆಗೆ ಕ್ರಮ ಕೈಗೊಳ್ಳಲಿ.
- ಪ್ರಿಯಾಂಕ್ ಖರ್ಗೆ, ಸಚಿವ
ಪ್ರತೀ ಶುಕ್ರವಾರ ನಾನು ಕಲಬುರಗಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತೇನೆ. ಇದೀಗ ಶುಕ್ರವಾರ ವಿಮಾನ ಸೇವೆ ಬಂದ್ ಆಗಿರುವುದರಿಂದ ಆತಂಕ ಎದುರಾಗಿದೆ.
- ಝಹೀರ್ ಅಹ್ಮದ್, ವಿಮಾನ ಪ್ರಯಾಣಿಕ