ಕಾಸರಗೋಡು| ಆಟೋರಿಕ್ಷಾ ಪೊಲೀಸರು ವಶಕ್ಕೆ ತೆಗೆದುಕೊಂಡ ಹಿನ್ನೆಲೆ: ಮನನೊಂದು ಚಾಲಕ ಆತ್ಮಹತ್ಯೆ

Update: 2024-10-07 17:15 GMT

ಕಾಸರಗೋಡು: ನಾಲ್ಕು ದಿನಗಳ ಹಿಂದೆ ತನ್ನ ಆಟೋರಿಕ್ಷಾವನ್ನು  ಪೊಲೀಸರು ವಶಕ್ಕೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಮನನೊಂದು ಚಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡು ನಗರದಲ್ಲಿ ನಡೆದಿದೆ.

ಕರ್ನಾಟಕ ಮೂಲದ ಅಬ್ದುಲ್ ಸತ್ತಾರ್ (55) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ. ಕಾಸರಗೋಡು ರೈಲ್ವೆ ನಿಲ್ದಾಣ ರಸ್ತೆಯ ಬಾಡಿಗೆ ಕ್ವಾಟ್ರಸ್ ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಸೋಮವಾರ ಸಂಜೆ ಪತ್ತೆಯಾಗಿದ್ದಾರೆ. ಅವರು ಮೂರು ವರ್ಷಗಳಿಂದ ಕ್ವಾಟ್ರಸ್ ನಲ್ಲಿ ವಾಸ್ತವ್ಯ ಹೂಡಿ ನಗರದಲ್ಲಿ ಆಟೋರಿಕ್ಷಾ ಬಾಡಿಗೆ ನಡೆಸುತ್ತಿದ್ದರು.

ನಾಲ್ಕು ದಿನಗಳ ಹಿಂದೆ ನಗರದ ಗೀತಾ ಜಂಕ್ಷನ್ ಬಳಿ ಅಬ್ದುಲ್ ಸತ್ತಾರ್ ರವರ ಆಟೋರಿಕ್ಷಾ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ನಿಲುಗಡೆಗೊಳಿಸಲಾಗಿದೆ ಎಂದು ಆರೋಪಿಸಿ ನೋಟಿಸ್ ನೀಡಿ‌ ಪೊಲೀಸರು ವಶಕ್ಕೆ ತೆಗೆದುಕೊಳ್ಳಲಾಗಿತ್ತು.

ಸಾಲ ಪಡೆದು ಆಟೋರಿಕ್ಷಾ ಖರೀದಿಸಿದ್ದು, ಬಿಟ್ಟುಕೊಡುವಂತೆ ಹಲವು ಬಾರಿ ಠಾಣೆಗೆ ತೆರಳಿ ಪೊಲೀಸರಲ್ಲಿ ಮನವಿ ಮಾಡಿ ದರೂ ಪೊಲೀಸರು ಬಿಟ್ಟುಕೊಡಲು ಮುಂದಾಗಲಿಲ್ಲ ಎನ್ನಲಾಗಿದೆ. ಬಳಿಕ ಉಳಿದ ಆಟೋ ರಿಕ್ಷಾ ಚಾಲಕರು ಕಾಸರಗೋಡು ಡಿ ವೈ ಎಸ್ಪಿ ಕಚೇರಿಗೆ ತೆರಳಿ ಮನವಿ ಮಾಡಿದ್ದು, ಭರವಸೆ ನೀಡಿದ್ದರೂ ನಗರ ಠಾಣಾ ಪೊಲೀಸರು ಹಲವು ಕಾರಣ ನೀಡಿ ಆಟೋ ರಿಕ್ಷಾ ಬಿಟ್ಟು ಕೊಡಲು ಮುಂದಾಗಲಿಲ್ಲ ಎಂದು ಆರೋಪ ಕೇಳಿ ಬರುತ್ತಿದೆ. ಈ ನಡುವೆ ಸೋಮವಾರ ಸಂಜೆ ಅಬ್ದುಲ್ ಸತ್ತಾರ್ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಘಟನೆ ಬಳಿಕ ನಗರದಲ್ಲಿ ಆಟೋ ಚಾಲಕರು ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸಿದರು. ಆಟೋ ಚಾಲಕರು ನಗರ ಠಾಣೆಗೆ ಮುತ್ತಿಗೆ ಹಾಕಿದರು.

ಆಟೋರಿಕ್ಷಾ ಚಾಲಕ ಅಬ್ದುಲ್ ಸತ್ತಾರ್ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ಆರೋಪಕ್ಕೆ ಸಿಲುಕಿರುವ ಕಾಸರಗೋಡು ನಗರ ಠಾಣಾ ಸಬ್ ಇನ್ಸ್ ಪೆಕ್ಟರ್ ಪಿ . ಅನೂಪ್ ರನ್ನು ಚಂದೇರ ಪೊಲೀಸ್ ಠಾಣೆಗೆ ವರ್ಗಾಹಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ . ಶಿಲ್ಪಾ ಅವರು ಅನೂಪ್ ರನ್ನು ಕಚೇರಿಗೆ ಕರೆಸಿ ವರ್ಗಾವಣೆ ಆದೇಶವನ್ನು ನೀಡಿದ್ದಾರೆ. ಅನೂಪ್ ವಿರುದ್ಧ ಆರೋಪಿಗಳು ಕೇಳಿ ಬಂದ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News