ಬಾಳುಗೋಡು ಆದಿವಾಸಿ ಜನರ ಹಾಡಿಗೆ ಶೀಘ್ರ ಭೇಟಿ: ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾ. ಎಲ್ ನಾರಾಯಣಸ್ವಾಮಿ
ಬೆಂಗಳೂರು: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಎಲ್ ನಾರಾಯಣಸ್ವಾಮಿ ಅವರನ್ನು ಇಂದು ನೈಜ್ಯ ಹೋರಾಟಗಾರರ ವೇದಿಕೆಯ ಸದಸ್ಯರ ನಿಯೋಗವು ಭೇಟಿಯಾಗಿ ವಿರಾಜಪೇಟೆ ತಾಲೂಕು ಬಾಳುಗೋಡಿಯ ಆದಿವಾಸಿ ಗಿರಿ ಜನರಿಗೆ ಕೊಡಗು ಜಿಲ್ಲಾಡಳಿತವು ಮೂಲಭೂತ ಸೌಲಭ್ಯಗಳನ್ನು ಒದಗಿಸದಿರುವ ಬಗ್ಗೆ ದೂರನ್ನು ದಾಖಲಿಸಿದರು.
ವೇದಿಕೆಯ ಸದಸ್ಯರು ಈ ಹಿಂದೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕು ಬಾಳುಗೋಡು ಆದಿವಾಸಿ ಜನರು ಮೂಲಭೂತ ಸೌಕರ್ಯಗಳಿಲ್ಲದೆ ಇರುವ ಬಗ್ಗೆ ಕೊಡಗು ಜಿಲ್ಲಾಡಳಿತಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರು ಆದರೆ ಏನು ಪ್ರಯೋಜನವಾಗದಿರುವ ಹಿನ್ನೆಲೆಯಲ್ಲಿ ಇಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ ಅಲ್ಲಿ ವಾಸಿಸುವ 22ಕ್ಕೂ ಹೆಚ್ಚು ಕುಟುಂಬಗಳು ಯಾವುದೇ ಮೂಲಭೂತ ಸೌಕರ್ಯವಿಲ್ಲದೆ ಕುಡಿಯುವ ನೀರು, ವಿದ್ಯುತ್, ರಸ್ತೆ, ಶೌಚಾಲಯ ಇತ್ಯಾದಿಗಳಿಲ್ಲದೆ ಮಾನವ ಸಮಾಜದಿಂದ ದೂರವೇ ಉಳಿದಿದೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್ ಎಂ ವೆಂಕಟೇಶ್ ರವರು ನಾಗರೀಕ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆಯೋ? ಎಂಬ ಪ್ರಶ್ನೆಯನ್ನು ಜಿಲ್ಲಾಡಳಿತದ ಮುಂದೆ ಇಟ್ಟಿದ್ದರು. ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಫಲರಾದ ಜಿಲ್ಲಾಡಳಿತದ ವಿರುದ್ಧ ವೇದಿಕೆಯು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಿಗೆ ವಿವರಿಸಿದರು.
ನಿಯೋಗದ ಮನವಿಯನ್ನು ಬಹಳ ಗಂಭೀರವಾಗಿ ಪರಿಗಣಿಸಿ ಸ್ಪಂದಿಸಿದ ನ್ಯಾಯಮೂರ್ತಿ ನಾರಾಯಣಸ್ವಾಮಿ ಅವರು ತಕ್ಷಣ ಕೊಡಗು ಜಿಲ್ಲಾಡಳಿತದೊಂದಿಗೆ ದೂರವಾಣಿ ಮೂಲಕ ಚರ್ಚಿಸಿ ಬಾಳುಗೋಡು ಆದಿವಾಸಿ ಜನರ ಹಾಡಿಗೆ ತಿಂಗಳ ಕೊನೆಯಲ್ಲಿ ಭೇಟಿ ಮಾಡುವುದಾಗಿ ತಿಳಿಸಿದರು. ನೈಜ ಹೋರಾಟಗಾರರ ವೇದಿಕೆಯ ಹೆಚ್ಎಂ ವೆಂಕಟೇಶ ಅವರು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ನಮ್ಮ ಮನವಿಗೆ ಸ್ಪಂದಿಸಿರುವುದಕ್ಕೆ ಧನ್ಯವಾದಗಳು ಅರ್ಪಿಸಿದ್ದಾರೆ. ನಿಯೋಗದಲ್ಲಿ ಕುಣಿಗಲ್ ನರಸಿಂಹಮೂರ್ತಿ, ಟಿ ಜಗದೀಶ್, ಬಿಎಸ್ ಲೋಕೇಶ್, ಮುದ್ದು ರಂಗಪ್ಪ ಇದ್ದರು.