ರಾಜ್ಯಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನ ಮಾಡುತ್ತಿರುವವರೇ ದುಷ್ಟಶಕ್ತಿಗಳು : ಡಿಸಿಎಂ ಡಿ.ಕೆ.ಶಿವಕುಮಾರ್

Update: 2024-10-11 14:32 GMT

ಮಡಿಕೇರಿ: "ಅನವಶ್ಯಕ ವಿಚಾರ ಇಟ್ಟುಕೊಂಡು ರಾಜ್ಯಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನ ಮಾಡುತ್ತಿರುವವರೇ ದುಷ್ಟಶಕ್ತಿಗಳು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಮಡಿಕೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಶುಕ್ರವಾರ ಪ್ರತಿಕೆಗಳಿಗೆ ನೀಡಿರುವ ಸರ್ಕಾರದ ಜಾಹೀರಾತಿನಲ್ಲಿ ದುಷ್ಟಶಕ್ತಿಗಳು ಎಂದು ಹೇಳಿದ್ದು ಆ ದುಷ್ಟಶಕ್ತಿಗಳು ಯಾರು ಎಂದು ಕೇಳಿದಾಗ, ಈ ಮೇಲಿನಂತೆ ಉತ್ತರಿಸಿದರು.

"ದುಃಖವನ್ನು ನಿವಾರಿಸುವ ದುರ್ಗಾ ದೇವಿ, ದುಷ್ಟರನ್ನು ದೂರಮಾಡಿ ಎಲ್ಲರಿಗೂ ಒಳ್ಳೆಯದನ್ನು ಮಾಡಿ ಹರಸಲಿ. ನಮ್ಮ ರಾಜ್ಯ ಶಾಂತಿಯ ತೋಟವಾಗಿ ಪರಿವರ್ತನೆ ಆಗಬೇಕೆಂದು ಪ್ರಾರ್ಥಿಸುತ್ತೇನೆ" ಎಂದು ತಿಳಿಸಿದರು.

ಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಶಿ ಅವರು ಕಾಂಗ್ರೆಸ್ ಪಕ್ಷವೇ ದುಷ್ಟಶಕ್ತಿಗೆ ಪ್ರಚೋದನೆ ನೀಡುತ್ತಿದೆ ಎನ್ನುವ ಹೇಳಿಕೆ ಬಗ್ಗೆ ಕೇಳಿದಾಗ, "ನಾನು ವಿರೋಧ ಪಕ್ಷದವರಿಗೆ ಉತ್ತರ ನೀಡಲು ಬಯಸುವುದಿಲ್ಲ. ಸಕಾರಾತ್ಮಕ ವಿಚಾರದ ಬಗ್ಗೆ ಮಾತ್ರ ಮಾತನಾಡುತ್ತೇನೆ. ಬಿಜೆಪಿ ನಾಯಕರ ಮೇಲಿರುವ ಪ್ರಕರಣಗಳನ್ನು ನಾವು ಹಿಂದಕ್ಕೆ ಪಡೆದಿದ್ದೇವೆ. ಈ ಬಗ್ಗೆ ಗೃಹಸಚಿವರು ಹೆಚ್ಚಿನ ಮಾಹಿತಿ ನೀಡುತ್ತಾರೆ" ಎಂದರು.

ಮೈಸೂರು ದಸರಾದಂತೆ ಮಡಿಕೇರಿ ದಸರಾ ಕೂಡ ಖ್ಯಾತಿ ಪಡೆಯಲಿ:

"ನಮ್ಮ ಕೊಡಗಿನ ಸಂಸ್ಕೃತಿಯ ಸಂಕೇತ ಮಡಿಕೇರಿ ದಸರಾಕ್ಕೆ ಚಾಲನೆ ನೀಡಲು ಇಂದು ಮಡಿಕೇರಿಗೆ ಭೇಟಿ ನೀಡಿದ್ದೇನೆ. ಈ ವಿಶೇಷ ಸಂದರ್ಭ ಹಾಗೂ ನಮ್ಮ ಸಂಸ್ಕೃತಿಯ ಸಂಕೇತದ ಆಚರಣೆಗೆ ಪ್ರೋತ್ಸಾಹ ನೀಡಬೇಕು ಎಂದು ಬಂದಿದ್ದೇನೆ. ಜಿಲ್ಲಾ ನಾಯಕರು ಹಾಗೂ ಕಾರ್ಯಕರ್ತರು ನನಗೆ ಸ್ವಾಗತ ಕೋರಿದ್ದು, ಮೈಸೂರು ದಸರಾ ಮಾದರಿಯಲ್ಲೇ ಮಡಿಕೇರಿ ದಸರಾ ಕೂಡ ಖ್ಯಾತಿ ಪಡೆಯಬೇಕು. ಇದಕ್ಕಾಗಿ ಈ ಭಾಗದ ಜನರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ" ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News