ಮಡಿಕೇರಿ | ನಕಲಿ ಚಿನ್ನ ಅಡವಿಟ್ಟು ವಂಚನೆ ; 12 ಮಂದಿ ಆರೋಪಿಗಳ ಬಂಧನ

Update: 2024-12-19 17:41 GMT

ಮಡಿಕೇರಿ : ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮತ್ತು ಇದರ ವಿವಿಧ ಶಾಖೆಗಳು ಸೇರಿದಂತೆ ಹಣಕಾಸು ಸಂಸ್ಥೆಗಳಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು 34,95,016 ರೂ. ವಂಚಿಸಿರುವ ಪ್ರಕರಣದ 12 ಆರೋಪಿಗಳನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ನಗರದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮುಖ್ಯ ಶಾಖೆಯಲ್ಲಿ ಮುಹಮ್ಮದ್ ರಿಝ್ವಾನ್ ಕೆ.ಎ. ಎಂಬಾತ ಡಿ.4ರಂದು 8 ಚಿನ್ನದ ಬಳೆಗಳನ್ನು ಅಡಮಾನವಿಟ್ಟು ಸಾಲ ಪಡೆಯುವ ಸಂದರ್ಭ, ಆಭರಣಗಳನ್ನು ಪರಿಶೀಲಿಸಿದಾಗ ಅವುಗಳು ನಕಲಿ ಎನ್ನುವುದು ಕಂಡು ಬಂದಿದೆ. ಇದೇ ರೀತಿ ಎಮ್ಮೆಮಾಡು ನಿವಾಸಿಗಳಾದ ರಿಯಾಝ್, ಖತೀಜಾ, ಮುಹಮ್ಮದ್ ಹನೀಫ್, ಕುಂಜಿಲ ಗ್ರಾಮದ ನಿವಾಸಿಗಳಾದ ಅಬ್ದುಲ್ ನಾಸೀರ್, ಮೂಸಾ ಮತ್ತು ಹಂಝ ಎಂಬವರು ಮಡಿಕೇರಿ, ಭಾಗಮಂಡಲ, ವೀರಾಜಪೇಟೆ, ಕಡಂಗಗಳಲ್ಲಿನ ಕೆಡಿಸಿಸಿ ಬ್ಯಾಂಕ್, ಮಡಿಕೆೇರಿಯ ಮುತ್ತೂಟ್ ಫಿನ್ ಕಾರ್ಪ್ ಮತ್ತು ಭಾಗಮಂಡಲ ವಿಎಸ್‌ಎಸ್‌ಎನ್ ಬ್ಯಾಂಕ್‌ಗಳಲ್ಲಿ ಒಟ್ಟು 625 ಗ್ರಾಂ. ನಕಲಿ ಚಿನ್ನಾಭರಣಗಳನ್ನು ಅಡಮಾನವಿಟ್ಟು ಸಾಲ ಪಡೆದಿದ್ದರೆಂದು ತಿಳಿಸಿದರು.

ವಂಚನೆ ಪ್ರಕರಣದಲ್ಲಿ ಕೇರಳದ ಮಲಪ್ಪುರಂ ನಿವಾಸಿ ನವಾಝ್ ಎಂಬಾತ ನಕಲಿ ಚಿನ್ನ ನೀಡಿರುವುದು ಕಂಡು ಬಂದಿದ್ದು, ಮತ್ತಷ್ಟು ತನಿಖೆ ನಡೆಸಿದ ಸಂದರ್ಭ ಈ ಕೃತ್ಯದ ರೂವಾರಿ ಕೆೇರಳದ ಎರ್ನಾಕುಲಂ ಜಿಲ್ಲೆಯ ಅಕ್ಕಸಾಲಿಗ ಮುಹಮ್ಮದ್ ಕುಂಞ ಎಂಬುದು ಪತ್ತೆಯಾಗಿರುವುದಾಗಿ ಎಸ್ಪಿ ಮಾಹಿತಿ ನೀಡಿದರು.

ಬಂಧಿತ ಆರೋಪಿಗಳು :

ಪ್ರಕರಣದ ಆರೋಪಿಗಳಾದ ಕುಂಜಿಲದ ಮುಹಮ್ಮದ್ ರಿಝ್ವಾನ್, ಎಮ್ಮೆಮಾಡುವಿನ ರಿಯಾಝ್ ಪಿ.ಎಚ್., ಕುಂಜಿಲದ ಅಬ್ದುಲ್ ನಾಸೀರ್, ಮಲಪ್ಪುರಂನ ನವಾಝ್ ಕೆ.ಪಿ., ಎರ್ನಾಕುಲಂನ ನಿಶಾದ್ ಕೆ.ಎ., ಮುಹಮ್ಮದ್ ಕುಂಞ, ಪ್ರದೀಪ್ ಪಿ.ಜೆ., ಎಮ್ಮೆಮಾಡುವಿನ ಮೂಸಾ, ಪಡಿಯಾನಿಯ ಮುಹಮ್ಮದ್ ಹನೀಫ್ ಎಂ.ಎಂ., ಎಮ್ಮೆಮಾಡುವಿನ ಖತೀಜಾ, ಅಯ್ಯಂಗೇರಿಯ ರಫೀಕ್ ಮತ್ತು ಫರಾನ್ ಎಂಬವವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿಯ ಬಂಧನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಪ್ರಕರಣದಲ್ಲಿ 223 ಗ್ರಾಂ. ತೂಕದ ಚಿನ್ನ ಲೇಪಿತ 28 ಬಳೆಗಳು, 2 ಲಕ್ಷ ನಗದು, 1.40 ಲಕ್ಷ ರೂ. ಮೌಲ್ಯದ ಒಂದು ಐಫೋನ್ ವಶಪಡಿಸಿಕೊಂಡಿರುವುದಲ್ಲದೆ, ಬ್ಯಾಂಕ್ ಖಾತೆಯ ಫ್ರೀಜ್ ಮೊತ್ತ 2,08,221, ವಿಮೆ ಮೇಲೆ ಹಣ ಹೂಡಿಕೆಯ 1,26,504 ರೂ. ಅನ್ನು ವಶಕ್ಕೆ ಪಡೆದಿರುವುದಾಗಿ ಎಸ್ಪಿ ತಿಳಿಸಿದರು.

ಕಾರ್ಯಾಚರಣೆಯಲ್ಲಿ ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ ಮಹೇಶ್ ಕುಮಾರ್, ಸೆನ್ ಡಿವೈಎಸ್ಪಿ ರವಿ, ಸಿಪಿಐ ರಾಜು ಪಿ.ಕೆ., ಸಿಪಿಐ ಅನೂಪ್ ಮಾದಪ್ಪ, ಡಿಸಿಆರ್‌ಬಿ ಪಿಐ ಮೇದಪ್ಪ, ಮಡಿಕೇರಿ ನಗರ ಪಿಎಸ್ಸೈ ಲೋಕೇಶ್, ಭಾಗಮಂಡಲ ಪಿಎಸ್ಸೈ ಶೋಭಾ ಲಾಮಣಿ, ಅಪರಾಧ ಪತ್ತೆ ಸಿಬ್ಬಂದಿ, ಡಿಸಿಆರ್‌ಬಿ ಹಾಗೂ ತಾಂತ್ರಿಕ ಸಿಬ್ಬಂದಿ ಪಾಲ್ಗೊಂಡಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News