ಕುಶಾಲನಗರ | ವಿವಾಹ ಶಾಸ್ತ್ರದ ಸಂದರ್ಭ ಚಿನ್ನಾಭರಣ, ನಗದು ಕಳವು : ಮೂವರು ಆರೋಪಿಗಳ ಬಂಧನ

Update: 2024-12-11 14:26 GMT

ಬಂಧಿತ ಆರೋಪಿಗಳು

ಕುಶಾಲನಗರ : ಕುಶಾಲನಗರದಲ್ಲಿ ವಿವಾಹ ಶಾಸ್ತ್ರ ನಡೆಯುತ್ತಿದ್ದ ಸಂದರ್ಭ ವಧುವಿನ ಕೊಠಡಿಯಿಂದ ಚಿನ್ನಾಭರಣ ಮತ್ತು ನಗದನ್ನು ಕಳವು ಮಾಡಿದ ಪ್ರಕರಣವನ್ನು ಬೇಧಿಸಿರುವ ಕೊಡಗು ಜಿಲ್ಲಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕುಶಾಲನಗರ ಸಮೀಪದ ತೊರೆನೂರು ನಿವಾಸಿ ಚರಣ್ ಕುಮಾರ್(19), ಗೋಣಿಮರೂರು ಗ್ರಾಮದ ನಿವಾಸಿ ನಿತಿನ್ ಎಸ್.ಎಲ್.(22) ಹಾಗೂ ಅರಿಶಿನಕುಪ್ಪೆ ನಿವಾಸಿ ಮಿಥುನ್(24) ಎಂಬುವವರೇ ಬಂಧಿತ ಆರೋಪಿಗಳು.

ಕುಶಾಲನಗರದ ರೈತ ಭವನದಲ್ಲಿ ನ.28 ರಂದು ನಳಿನಿ ಎಂಬುವವರ ಮಗಳ ವಿವಾಹ ಶಾಸ್ತ್ರ ನಡೆಯುತಿತ್ತು. ಈ ಸಂದರ್ಭ ವಧುವಿನ ಕೊಠಡಿಯಲ್ಲಿದ್ದ 28 ಗ್ರಾಂ ಚಿನ್ನಾಭರಣ ಮತ್ತು 5 ಸಾವಿರ ರೂ. ನಗದು ಕಳವಾಗಿತ್ತು. ಈ ಬಗ್ಗೆ ನಳಿನಿ ಅವರು ನೀಡಿದ ದೂರನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದರು. ಮಾಲು ಸಹಿತ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸೋಮವಾರಪೇಟೆ ಉಪವಿಭಾಗದ ಡಿವೈಎಸ್‍ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯ ಪಿಐ ಪ್ರಕಾಶ್ ಬಿ.ಜಿ., ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ಪಿಎಸ್‍ಐ ಹೆಚ್.ಟಿ.ಗೀತಾ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News