ಪೆರಾಜೆಯ ಉತ್ತರಕುಮಾರ್ ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Update: 2024-12-13 18:15 GMT

ಸಾಂದರ್ಭಿಕ ಚಿತ್ರ

ಸುಳ್ಯ: ಪೆರಾಜೆಯ ಉತ್ತರ ಕುಮಾರ್ ಅವರನ್ನು ಹತ್ಯೆಗೈದ ಪ್ರಕರಣದಲ್ಲಿ ಆರೋಪಿಯಾಗಿರುವ ತಾರಿಣಿ ಮತ್ತು ಅವರ ಮಗ ಧರಣಿಕುಮಾರ್ ಅವರ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಮಡಿಕೇರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

2020 ಮೇ 8 ರಂದು ಪೆರಾಜೆ ಗ್ರಾಮದ ಉತ್ತರಕುಮಾರ ಎಂಬವರೊಂದಿಗೆ ಅವರ ಅಣ್ಣನ ಪತ್ನಿ ತಾರಿಣಿ ಮತ್ತು ಆಕೆಯ ಮಗ ಧರಣಿ ಕುಮಾರ್ ಎಂಬವರು ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ ಕುತ್ತಿಗೆ, ಕೈ, ತೊಡೆ ಹಾಗೂ ಶರೀರದ ಎಲ್ಲಾ ಭಾಗಗಳಿಗೆ ಕಡಿದು ಅವರನ್ನು ಕೊಲೆ ಮಾಡಿದ್ದರು. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ 9-5-2020 ರಂದು ಆರೋಪಿಗಳಾದ ತಾರಿಣಿ ಮತ್ತು ಧರಣಿಕುಮಾರನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.

ಪ್ರಕರಣದ ತನಿಖಾಧಿಕಾರಿಗಳಾದ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸಿ.ಎನ್. ದಿವಾಕರ್ ಮತ್ತು ಸಹಾಯಕ ತನಿಖಾಧಿಕಾರಿಗಳಾದ ಎ.ಎಸ್.ಐ. ಶ್ರೀಧರ್ ರವರು ಪ್ರಕರಣದ ತನಿಖೆ ಕೈಗೊಂಡು ದಿನಾಂಕ 14-7-2020 ರಂದು ಮಡಿಕೇರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ದ.12 ರಂದು ಗುರುವಾರ ಆರೋಪಿಗಳಾದ ತಾರಿಣಿ (46) ಮತ್ತು ಧರಣಿ ಕುಮಾರ್ (22) ಇವರಿಬ್ಬರಿಗೆ ಕೊಲೆ ಮಾಡಿದ್ದಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು ತಲಾ ರೂ. ಒಂದು ಲಕ್ಷ ದಂಡವನ್ನು ಹಾಗೂ ಸಾಕ್ಷ್ಯವನ್ನು ನಾಶ ಪಡಿಸಿದ ಅಪರಾಧಕ್ಕಾಗಿ 3 ವರ್ಷ ಶಿಕ್ಷೆ ಮತ್ತು ತಲಾ ರೂ. 10000 ಸಾವಿರ ದಂಡ ವಿಧಿಸಿ ನ್ಯಾಯಾಧೀಶರಾದ ಹೊಸಮನಿ ಪುಂಡಲೀಕ್ ಅವರು ತೀರ್ಪು ನೀಡಿದ್ದಾರೆ. ಇಲಾಖೆಯ ಪರವಾಗಿ ಸರಕಾರಿ ಅಭಿಯೋಜಕರಾದ ಕೆ.ಜಿ. ಅಶ್ವಿನಿ ಅವರು ವಾದ ಮಂಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News