ಗ್ಯಾಸ್ ಸೋರಿಕೆಯಾಗಿ ಬೆಂಕಿ ಅವಘಡದಲ್ಲಿ ಪೋಷಕರು ಮೃತ್ಯು ; ಪುತ್ರಿಗೆ 28 ಲಕ್ಷ ರೂ. ಪರಿಹಾರ
ಮಡಿಕೇರಿ : ಗ್ಯಾಸ್ ಸೋರಿಕೆಯಾಗಿ ತನ್ನ ಪೋಷಕರನ್ನು ಕಳೆದುಕೊಂಡ ಬಾಲಕಿಗೆ ಮಂಗಳೂರಿನ ಎಚ್‌ಪಿ ಗ್ಯಾಸ್ ಸಂಸ್ಥೆ ಮತ್ತು ಮುಂಬೈನ ಎಸ್‌ಬಿಐ ಜನರಲ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್ ಸಂಸ್ಥೆ ಜಂಟಿಯಾಗಿ ಅಥವಾ ಪ್ರತ್ಯೇಕವಾಗಿ ದೂರುದಾರರಿಗೆ ಪಾಲಿಸಿಯ ಮೊತ್ತ ಮತ್ತು ಮಾನಸಿಕ ವೇದನೆಗೆ ಒಟ್ಟು 28 ಲಕ್ಷ ರೂ.ಗಳ ಪರಿಹಾರ ಪಾವತಿಸುವಂತೆ ಕೊಡಗು ಜಿಲ್ಲಾ ಗ್ರಾಹಕರ ಆಯೋಗ ಆದೇಶ ನೀಡಿದೆ.
ಸುಂಟಿಕೊಪ್ಪ ನಿವಾಸಿಯಾಗಿದ್ದ ಎಚ್.ಕೆ.ರಮೇಶ್ ಮತ್ತು ಎನ್.ರೂಪಾ ದಂಪತಿ ಎಚ್‌ಪಿ ಗ್ಯಾಸ್ ಸಂಸ್ಥೆಯ ಗ್ಯಾಸ್ ಸಂಪರ್ಕ ಪಡೆದುಕೊಂಡಿದ್ದರು. 2023ರ ಅ.4ರಂದು ರಾತ್ರಿ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಸಂದರ್ಭ ಗ್ಯಾಸ್ ಸೋರಿಕೆಯಾಗಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಎಚ್.ಕೆ.ರಮೇಶ್ ಮತ್ತು ಎನ್.ರೂಪಾ ಅವರು ತೀವ್ರ ಗಾಯಗೊಂಡು 2023ರ ಅ.8ರಂದು ರಮೇಶ್ ಮತ್ತು ಅ.9ರಂದು ಎನ್.ರೂಪಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಅಗ್ನಿ ದುರಂತದಲ್ಲಿ ಆದ ನಷ್ಟಗಳಿಗೆ ಸಂಬಂಧಪಟ್ಟ ಸಂಸ್ಥೆಗಳಿಂದ ಯಾವುದೇ ಪರಿಹಾರ ದೊರಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೃತರ ಏಕೈಕ ಪುತ್ರಿ ಕು.ಲಿಪಿಕಾ ಅಲಿಯಾಸ್ ಐಶ್ವರ್ಯಾ ಅವರು ಸೂಕ್ತ ಪರಿಹಾರವನ್ನು ಎದುರುದಾರರಿಂದ ದೊರಕಿಸಿಕೊಡಬೇಕು ಎಂದು ಅವರ ವಿರುದ್ಧ ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಎರಡು ದೂರನ್ನು ಸಲ್ಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಆಯೋಗದ ಅಧ್ಯಕ್ಷ ಸಿ.ರೇಣುಕಾಂಬ ಮತ್ತು ಸದಸ್ಯ ಗೌರಮ್ಮಣ್ಣಿ ಅವರು ವಾದ-ಪ್ರತಿವಾದಗಳನ್ನು ಚರ್ಚಿಸಿದ್ದರು. ಎರಡೂ ದೂರನ್ನು ಭಾಗಶಃ ಪುರಸ್ಕರಿಸಿದ ಆಯೋಗ, ಮಂಗಳೂರು ಎಚ್‌ಪಿ ಗ್ಯಾಸ್ ಸಂಸ್ಥೆ ಹಾಗೂ ಮುಂಬೈನ ಎಸ್‌ಬಿಐ ಜನರಲ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್ ಸಂಸ್ಥೆ ಜಂಟಿಯಾಗಿ ಅಥವಾ ಪ್ರತ್ಯೇಕವಾಗಿ ದೂರುದಾರರಿಗೆ ಪಾಲಿಸಿಯ ಮೊತ್ತ ಮತ್ತು ಮಾನಸಿಕ ವೇದನೆ, ಖರ್ಚು ವೆಚ್ಚಗಳಿಗೆ ಒಟ್ಟು 28 ಲಕ್ಷ ರೂ.ಗಳ ಪರಿಹಾರ ಪಾವತಿಸುವಂತೆ ಆದೇಶ ನೀಡಿದೆ.