ವಿರಾಜಪೇಟೆ | ಕಾಫಿ ತೋಟಗಳಲ್ಲಿದ್ದ 9 ಆನೆಗಳನ್ನು ಕಾಡಿಗಟ್ಟಿದ ಅರಣ್ಯ ಇಲಾಖೆ
ವಿರಾಜಪೇಟೆ : ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ 9 ಕಾಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ವಿರಾಜಪೇಟೆಯ ಬಾಡಗ ಬಾಣಂಗಾಲ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಮೂರು ಮರಿಯೊಂದಿಗೆ ಒಂಭತ್ತು ಕಾಡಾನೆಗಳು ಕಾಣಿಸಿಕೊಂಡಿದ್ದವು. ಕಳೆದ ಕೆಲವು ದಿನಗಳಿಂದ ಕಾಡಾನೆ ಹಿಂಡು ಬೆಳೆ ನಾಶ ಮಾಡಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು.
ಹಾಡಹಗಲೇ ರಾಜಾರೋಷವಾಗಿ ಗ್ರಾಮದಲ್ಲಿ ಕಾಡಾನೆಗಳು ಸಂಚರಿಸುತ್ತಿದ್ದ ಕಾರಣ ಗ್ರಾಮಸ್ಥರು, ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ಮನೆಯಿಂದ ಹೊರ ಬರಲು ಭಯ ಪಡುತ್ತಿದ್ದರು.
ಗ್ರಾಮಸ್ಥರ ಒತ್ತಾಯದ ಹಿನ್ನೆಲೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾರ್ಗೊಳ್ಳಿ ಘಟ್ಟದಳ್ಳ ಮಾರ್ಗವಾಗಿ ಕಾಡಾನೆಗಳನ್ನು ದುಬಾರೆ ಅರಣ್ಯಕ್ಕೆ ಅಟ್ಟುವಲ್ಲಿ ಯಶಸ್ವಿಯಾದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಅವರ ನಿರ್ದೇಶನದ ಮೇರೆಗೆ ವಲಯ ಅರಣ್ಯಾಧಿಕಾರಿ ಗಂಗಾಧರ್ ಅವರ ನೇತೃತ್ವದಲ್ಲಿ ಚೆನ್ನಂಗಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಶಶಿ ಪಿ.ಟಿ, ಇಟಿಎಪ್ ಉಪ ವಲಯ ಅರಣ್ಯಾಧಿಕಾರಿ ದೇವರಾಜ್, ದುಬಾರೆ ಉಪವಲಯನ್ಯಾಧಿಕಾರಿ ರಂಜನ್ ಕೆ.ಪಿ, ಗಸ್ತು ಅರಣ್ಯ ಪಾಲಕ ರಾಜೇಶ್, ಆರ್ ಆರ್ ಟಿ ಮತ್ತು ಇ ಟಿ ಎಫ್ ಸಿಬ್ಬಂದಿಗಳಾದ ಶಂಕರ, ಭರತ್, ರಂಜಿತ್, ರೋಶನ್, ಪ್ರದೀಪ್, ಮುತ್ತಣ್ಣ, ಸುಂದರ, ದಿನು, ಧನು, ಸಚಿನ್ ಪೊನ್ನಣ್ಣ, ಕೃಷ್ಣಪ್ಪ, ಸಂಜು, ಶಿವು, ಚಾಲಕರಾದ ಗಗನ್, ರೋಹಿತ್ ಹಾಗೂ ವನ್ಯಜೀವಿ ವಲಯದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಶಾಶ್ವತ ಪರಿಹಾರ :
ಅರಣ್ಯ ವ್ಯಾಪ್ತಿಯಲ್ಲಿ ನೀರು, ಆಹಾರ ಸಿಗದ ಪರಿಣಾಮ ಕಾಡಾನೆಗಳು ಮತ್ತೆ ಕಾಡಿನಿಂದ ನಾಡಿನತ್ತ ಮುಖ ಮಾಡುತ್ತಿವೆ. ಅರಣ್ಯದಂಚಿನ ಬಹುತೇಕ ಪ್ರದೇಶಗಳಲ್ಲಿ ಆನೆ ಕಂದಕ, ಸೋಲಾರ್ ಬೇಲಿ, ರೈಲ್ವೆ ಬ್ಯಾರಿಕ್ಯಾಡ್ ಅಳವಡಿಕೆ ಕಾರ್ಯ ಪೂರ್ಣಗೊಂಡಿಲ್ಲ. ಯಾವುದೇ ಅಡೆತಡೆ ಇಲ್ಲದಿರುವುದರಿಂದ ಪ್ರಾಣಿಗಳು ನಿರಂತರವಾಗಿ ದಾಳಿ ಮಾಡುತ್ತಿವೆ. ತಕ್ಷಣ ಅರಣ್ಯ ಇಲಾಖೆ ಶಾಶ್ವತ ಯೋಜನೆಯನ್ನು ರೂಪಿಸಿ ಕಾಡುಪ್ರಾಣಿಗಳ ಹಾವಳಿಯನ್ನು ತಡೆಗಟ್ಟಬೇಕೆಂದು ಕಾರ್ಮಿಕ ಮುಖಂಡ ಮಹದೇವು ಇದೇ ಸಂದರ್ಭ ಒತ್ತಾಯಿಸಿದರು.