ದೇವಾಲಯ ಸಮಿತಿಯ ಕಟ್ಟುಪಾಡುಗಳಿಗೆ ನಾವು ಬದ್ಧ : ಕಟ್ಟೆಮಾಡು ಗೌಡ ಸಮುದಾಯ ಸ್ಪಷ್ಟನೆ
ಮಡಿಕೇರಿ : ಯಾವುದೇ ಜಾತಿ, ಜನಾಂಗ ಅಥವಾ ಒಂದು ವರ್ಗಕ್ಕೆ ಸೀಮಿತವಾದ ಸಂಪ್ರದಾಯಗಳಿಗೆ ಆದ್ಯತೆ ನೀಡದೆ ದೇವರ ಸನ್ನಿಧಿಯಲ್ಲಿ ಎಲ್ಲರೂ ಒಂದೇ ಎನ್ನುವ ಭಾವನೆಯಿಂದ ಶ್ರೀಮಹಾಮೃತ್ಯುಂಜಯ ದೇವಾಲಯ ಸಮಿತಿ ರೂಪಿಸಿರುವ ಕಟ್ಟುಪಾಡುಗಳಿಗೆ ನಾವು ಬದ್ಧ ಎಂದು ಕಟ್ಟೆಮಾಡು ಗ್ರಾಮದ ಗೌಡ ಸಮುದಾಯ ಸ್ಪಷ್ಟಪಡಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಪ್ಪಯಂಡ್ರ ಮಣಿ ಮುತ್ತಪ್ಪ ಅವರು, ಡಿ.27ರಂದು ದೇವಾಲಯದ ಜಾತ್ರಾ ಮಹೋತ್ಸವದ ಸಂದರ್ಭ ದೇವರು ಜಳಕಕ್ಕೆ ಹೊರಡುವಾಗ ದೇವಾಲಯ ಸಮಿತಿಯ ನಿಯಮವನ್ನು ಮೀರಿ ಕೆಲವರು ಉದ್ದೇಶಪೂರ್ವಕವಾಗಿ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿದ್ದಾರೆ. ಇದು ದೇವಾಲಯದ ಅಧಿಕಾರ ಹಿಡಿಯುವ ಹುನ್ನಾರವಾಗಿದೆ ಎಂದು ಆರೋಪಿಸಿದರು.
ಸಂಘರ್ಷ ನಡೆಯುವ ಸಂದರ್ಭ ಎರಡೂ ಕಡೆಯಿಂದ ಮಾತಿಗೆ ಮಾತು ಬೆಳೆದಿದೆ, ತಳ್ಳಾಟವಾಗಿದೆ. ಆದರೆ ಯಾರ ಮೇಲೂ ಹಲ್ಲೆಯಾಗಿಲ್ಲ, ಯಾರನ್ನೂ ದೇವಾಲಯದ ಒಳಗೆ ಬರಬೇಡಿ ಎಂದು ಹೇಳಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವಿನಾಕಾರಣ ಸುಳ್ಳು ವದಂತಿ ಹಬ್ಬಿಸಲಾಗುತ್ತಿದೆ. ದೇವಾಲಯದ ಸಿಸಿ ಕ್ಯಾಮರಾದಲ್ಲಿ ಸತ್ಯಾಂಶ ಸೆರೆಯಾಗಿದ್ದು, ಯಾರು ಬೇಕಾದರೂ ಪರಿಶೀಲಿಸಬಹುದು ಎಂದು ಹೇಳಿದರು.
ಶ್ರೀಮಹಾಮೃತ್ಯುಂಜಯ ದೇವಾಲಯದ ಅಭಿವೃದ್ಧಿಗಾಗಿ ಗ್ರಾಮದ ಎಲ್ಲಾ ಜಾತಿ ಜನಾಂಗಗಳು ಒಗ್ಗಟ್ಟಿನಿಂದ ಶ್ರಮಪಟ್ಟಿವೆ. ಅಷ್ಟೇ ಒಗ್ಗಟ್ಟಿನಿಂದ ಜಾತ್ರಾ ಮಹೋತ್ಸವ ನಡೆಸಬೇಕೆನ್ನುವ ಸಂಭ್ರಮ ಮನೆ ಮಾಡಿತ್ತು. ದೇವಾಲಯದಲ್ಲಿ ಮೇಲು, ಕೀಳೆನ್ನುವ ಮನೋಭಾವನೆ ಇರಬಾರದು, ಎಲ್ಲರೂ ಒಂದೇ ಎನ್ನುವ ದೃಷ್ಟಿಯಿಂದ ಜನಾಂಗದ ಸಾಂಪ್ರದಾಯಿಕ ಉಡುಪಿಗೆ ಅವಕಾಶ ನೀಡಿರಲಿಲ್ಲ. ಇದಕ್ಕೆ ಇಡೀ ಗ್ರಾಮಸ್ಥರ ಸಮ್ಮತಿ ಇತ್ತು ಎಂದು ಅಪ್ಪಯಂಡ್ರ ಮಣಿ ಮುತ್ತಪ್ಪ ಸ್ಪಷ್ಟಪಡಿಸಿದರು.
ಪ್ರಮಾಣ ಮಾಡಲಿ :
ಬಿದ್ರುಪಣೆ ಪ್ರಸನ್ನ ಮಾತನಾಡಿ ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿಸಿರುವಂತೆ ದೇವಾಲಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿಲ್ಲ, ದೌರ್ಜನ್ಯ ನಡೆದಿದ್ದರೆ ಶ್ರೀ ಮಹಾಮೃತ್ಯುಂಜಯನ ಎದುರು ಪ್ರಮಾಣ ಮಾಡಲಿ ಎಂದರು.
ದೇವಸ್ಥಾನದ ಅಭಿವೃದ್ಧಿಗಾಗಿ ಗ್ರಾಮದ ಎಲ್ಲಾ ಜಾತಿ ಜನಾಂಗದ ಮಂದಿ ಒಗ್ಗಟ್ಟಾಗಿ ರಾತ್ರಿ ಹಗಲೆನ್ನದೆ ಸ್ವಯಂ ಸೇವಕರಾಗಿ ದುಡಿದಿದ್ದಾರೆ. ಕಟ್ಟೆಮನೆ ಕುಟುಂಬಸ್ಥರೇ ಸುಮಾರು 2ಕೋಟಿ ರೂ.ಗಳಷ್ಟು ದೇಣಿಗೆ ನೀಡಿದ್ದಾರೆ. ಜಾತ್ರೋತ್ಸವದ ಸಂದರ್ಭ ಮಹಿಳೆಯರಾದಿಯಾಗಿ ಎಲ್ಲಾ ಗ್ರಾಮಸ್ಥರು ಶ್ರಮದಾನ ಮಾಡಿದ್ದಾರೆ. ಆದರೆ ಯಾವುದೇ ಕಾರ್ಯದಲ್ಲಿ ಭಾಗಿಯಾಗದ ಮಂದಿ ಕೇವಲ ಅಧಿಕಾರಕ್ಕಾಗಿ ಸಂಘರ್ಷ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು.
ಗೌಡರ ಅವಹೇಳನವನ್ನು ಇಡೀ ಗೌಡ ಸಮುದಾಯ ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಟ್ಟೆಮನೆ ದಿನೇಶ್, ಜೈನಿರ ಪಿ.ಸುಬ್ಬಯ್ಯ, ಕಟ್ಟೆಮನೆ ಆಶಿಕ್ ಅಪ್ಪಚ್ಚು ಹಾಗೂ ಕಾಂಗೀರ ಪೂವಯ್ಯ ಉಪಸ್ಥಿತರಿದ್ದರು.