ಕೊಡಗು: ಮೂರು ಕಳ್ಳತನ ಪ್ರಕರಣ; ಆರೋಪಿಯ ಬಂಧನ

Update: 2025-01-04 08:33 GMT

  ನಾಗರಾಜು

ಮಡಿಕೇರಿ ಜ.4 : ನಗರದಲ್ಲಿ ನಡೆದ ಮೂರು ಕಳ್ಳತನ ಪ್ರಕರಣಗಳ ಆರೋಪಿಯನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಕೊಳಗಿ ಗ್ರಾಮದ ನಿವಾಸಿ ನಾಗರಾಜು (37) ಬಂಧಿತ ಆರೋಪಿಯಾಗಿದ್ದು, ಈತನ ಬಳಿಯಿಂದ ರೂ.50 ಸಾವಿರ ನಗದು, 87 ಗ್ರಾಂ ಚಿನ್ನಾಭರಣ ಮತ್ತು 2 ಬೆಳ್ಳಿ ಚೈನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜನರಲ್ ತಿಮ್ಮಯ್ಯ ವೃತ್ತದ ಬಳಿಯ ನಿವಾಸಿ ರಜಿನಿ ಹರೀಶ್ ಎಂಬುವವರು 2024 ಡಿ.5 ರಂದು ಮಗಳು ಕಲಿಯುತ್ತಿರುವ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲೆಂದು ತೆರಳಿದ್ದರು. ರಾತ್ರಿ ಮನೆಗೆ ಮರಳಿದಾಗ ಕಳ್ಳತನವಾಗಿರುವುದು ಕಂಡು ಬಂದಿದೆ. ಬೀರುವಿನಲ್ಲಿದ್ದ ಸುಮಾರು 87 ಗ್ರಾಂ ಚಿನ್ನಾಭರಣಗಳನ್ನು ಕಳ್ಳರು ದೋಚಿರುವ ಕುರಿತು ರಜಿನಿ ಹರೀಶ್ ಅವರು ನೀಡಿರುವ ದೂರನ್ನು ಆಧರಿಸಿ ಮಡಿಕೇರಿ ಪೊಲೀಸರು ತನಿಖೆ ಕೈಗೊಂಡಿದ್ದರು.

ಆರೋಪಿ ನಾಗರಾಜುವನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಈತ ಇನ್ನೂ ಎರಡು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. 2024 ಮೇ 5 ರಂದು ನಗರದ ಶಾಂತಿನಿಕೇತನದಲ್ಲಿರುವ  ವೆಲೆರಿಯನ್ ಲೋಬೋ ಎಂಬವರಿಗೆ ಸೇರಿದ ದಿನಸಿ ಅಂಗಡಿಯಿಂದ ಲಕ್ಷಾಂತರ ರೂ. ದೋಚಿರುವುದು ಮತ್ತು 2024 ಜು.28 ರಂದು ಚಾಮುಂಡೇಶ್ವರಿ ನಗರದ ನಿವಾಸಿ ರಾಜಮ್ಮ ಮಹದೇವ ಅವರ ಮನೆಯಲ್ಲಿ ಅಂದಾಜು 12 ಗ್ರಾಂ ತೂಕದ ಚಿನ್ನಾಭಾರಣ, 3 ಜೊತೆ ಬೆಳ್ಳಿ ಚೈನ್ ಮತ್ತು ರೂ.10 ಸಾವಿರ ನಗದನ್ನು ಕಳ್ಳತನ ಮಾಡಿರುವುದು ತಿಳಿದು ಬಂದಿದೆ.

ಡಿವೈಎಸ್‍ಪಿ ಮಹೇಶ್ ಕುಮಾರ್, ಮಡಿಕೇರಿ ನಗರ ಸಿಪಿಐ ರಾಜು ಪಿ.ಕೆ, ಪಿಎಸ್‍ಐಗಳಾದ ಲೋಕೇಶ, ರಾಧ ಅಪರಾಧ ಪತ್ತೆ ಸಿಬ್ಬಂದಿಗಳು, ಡಿಸಿಆರ್ ಬಿ ಸಿಬ್ಬಂದಿ  ಹಾಗೂ ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮೂರು ಕಳ್ಳತನ ಪ್ರಕರಣಗಳ ಆರೋಪಿಯನ್ನು ಪತ್ತೆ ಹಚ್ಚಿ ಸಂಪೂರ್ಣ ಕಳವು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News