ಮಡಿಕೇರಿ: ಕಟ್ಟೆಮಾಡು ಗ್ರಾಮದಲ್ಲಿ ನಿರ್ಬಂಧಕಾಜ್ಞೆ ವಿಸ್ತರಣೆ

Update: 2025-01-01 12:32 GMT

ಮಡಿಕೇರಿ: ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಶ್ರೀ ಮಹಾ ಮೃತ್ಯುಂಜಯ ದೇವಾಲಯದ ಜಾತ್ರೋತ್ಸವದ ಸಂದರ್ಭ ಎರಡು ಗುಂಪುಗಳ ನಡುವೆ ನಡೆದ ಸಂಘರ್ಷದ ಹಿನ್ನೆಲೆ ದೇವಸ್ಥಾನ ವ್ಯಾಪ್ತಿಯಲ್ಲಿ ವಿಧಿಸಲಾಗಿದ್ದ ನಿರ್ಬಂಧಕಾಜ್ಞೆಯನ್ನು ಜ.7 ರ ಬೆಳಗ್ಗೆ 6 ಗಂಟೆಯವರೆಗೆ ವಿಸ್ತರಿಸಿ ಉಪವಿಭಾಗಾಧಿಕಾರಿ ಹಾಗೂ ಉಪವಿಭಾಗೀಯ ದಂಡಾಧಿಕಾರಿ ವಿನಾಯಕ್ ನರ್ವಡೆ ಅವರು ಆದೇಶಿಸಿದ್ದಾರೆ.

ಸದರಿ ಸ್ಥಳದಲ್ಲಿ ಪ್ರಸ್ತುತ ಉಂಟಾಗಿರುವ ಬೆಳವಣಿಗೆಗಳ ಸಂಬಂಧ ಆರಕಕ್ಷ ಅಧೀಕ್ಷಕರ ಕೋರಿಕೆಯನ್ನು ಪರಿಗಣಿಸಿ, ಜ.2 ರ ಬೆಳಗ್ಗಿನಿಂದ ಜ.7ರ ಬೆಳಗ್ಗೆ 6ರವರೆಗೆ ದೇವಸ್ಥಾನದ ಸುತ್ತಮುತ್ತಲಿನ 5 ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಬಂಧಕಾಜ್ಞೆ ವಿಧಿಸಲಾಗಿದೆ.

ಈ ಅವಧಿಯಲ್ಲಿ 5ಕ್ಕಿಂತ ಹೆಚ್ಚು ಜನ ಗುಂಪು ಸೇರದಂತೆ, ಪ್ರತಿಭಟನೆ, ಮೆರವಣಿಗೆ, ರ್ಯಾಲಿ, ಜಾಥಾ ನಡೆಸದಂತೆ ಮತ್ತು ಪ್ರಚೋದನಾತ್ಮಕ ಘೋಷಣೆ ಕೂಗದಂತೆ ಆದೇಶದಲ್ಲಿ ತಿಳಿಸಲಾಗಿದೆ.

ಇತ್ತೀಚೆಗೆ ಜಿಲ್ಲಾಡಳಿತ ನಡೆಸಿದ ಶಾಂತಿ ಸಭೆಯಲ್ಲಿ, ಬೈಲಾ ಗೊಂದಲ ನಿವಾರಣೆಗೆ ಮುಂದಿನ ಸೋಮವಾರದವರೆಗೆ ಕಾಲಾವಕಾಶವನ್ನು ನೀಡಲಾಗಿತ್ತು. ವಿಷಯಕ್ಕೆ ಸಂಬಂಧಿಸಿದಂತೆ ಅಗತ್ಯ ತೀರ್ಮಾನಗಳನ್ನು ಕೈಗೊಳ್ಳುವ ಸಲುವಾಗಿ ಜ.2 ರಂದು ಗ್ರಾಮಸ್ಥರು ದೇವಾಲಯದ ಆವರಣದಲ್ಲಿ ಸಭೆ ನಡೆಸುವ ಸಾಧ್ಯತೆ ಇತ್ತು. ಆದರೆ ಇದೀಗ ಜಿಲ್ಲಾಡಳಿತ ನಿರ್ಬಂಧಕಾಜ್ಞೆಯನ್ನು ವಿಸ್ತರಿಸಿರುವುದರಿಂದ ಸಭೆ ನಡೆಯುವ ಕುರಿತು ಗೊಂದಲ ಏರ್ಪಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News