ಕುಪ್ಯಚೇಲೆ ಧರಿಸಿ ಹೋದ ಕೊಡವರನ್ನು ತಡೆದ ಪ್ರಕರಣ | ನಾಪೋಕ್ಲು ಕೊಡವ ಸಮಾಜ ಖಂಡನೆ
ಮಡಿಕೇರಿ : ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯಕ್ಕೆ ಕುಪ್ಯಚೇಲೆ ಧರಿಸಿ ಹೋದ ಕೊಡವರನ್ನು ತಡೆದ ಪ್ರಕರಣ ಖಂಡನೀಯವೆಂದು ನಾಪೋಕ್ಲು ಕೊಡವ ಸಮಾಜದ ಮಹಾಸಭೆ ಖಂಡನಾ ನಿರ್ಣಯ ಕೈಗೊಂಡಿದೆ.
ಅನಾದಿಕಾಲದಿಂದಲೂ ಕೊಡವರು ಕೊಡವ ಸಾಂಪ್ರದಾಯಿಕ ಉಡುಗೆಯಾದ ಕುಪ್ಯಚೇಲೆ ಧರಿಸಿ ದೇವಾಯಗಳಿಗೆ ತೆರಳಿ ಪೂಜೆ ಸಲ್ಲಿಸುವುದು ವಾಡಿಕೆಯಾಗಿದೆ. ಆದರೆ ಕಟ್ಟೆಮಾಡಿನಲ್ಲಿ ಕುಪ್ಯಚೇಲೆಯನ್ನು ಕಳಚಿ ದೇವಾಯವನ್ನು ಪ್ರವೇಶಿಸುವಂತೆ ಒತ್ತಡ ಹೇರಿರುವುದು ಮತ್ತು ಹಲ್ಲೆಗೆ ಮುಂದಾಗಿರುವುದು ಖಂಡನೀಯ ಎಂದು ಸಭೆ ಅಸಮಾಧಾನ ವ್ಯಕ್ತಪಡಿಸಿತು.
ಕುಪ್ಯಚೇಲೆ ಧರಿಸಿ ದೇವಾಲಯಕ್ಕೆ ತೆರಳುವುದು ಕೊಡವರ ಹಕ್ಕಾಗಿದ್ದು, ಇದನ್ನು ತಡೆಯಲು ಸಾಧ್ಯವಿಲ್ಲ. ಕಟ್ಟೆಮಾಡಿನ ಪ್ರಕರಣಕ್ಕೆ ಕಾರಣಕರ್ತರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಎಂ.ಸಿ.ನಾಣಯ್ಯ ಒತ್ತಾಯಿಸಿದರು.
ನಾಪೋಕ್ಲು ಕೊಡವ ಸಮಾಜದ ಬೆಳ್ಳಿ ಹಬ್ಬದ ಸಮಾರಂಭದಲ್ಲೂ ಕಟ್ಟೆಮಾಡು ಘಟನೆಯ ಕುರಿತು ಚರ್ಚೆ ನಡೆಯಿತು. ಪ್ರಕರಣವನ್ನು ತೀವ್ರವಾಗಿ ಖಂಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಯಿತು.