ಕಟ್ಟೆಮಾಡು ದೇವಾಲಯ ಪ್ರಕರಣ | ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ : ಇಬ್ಬರ ಬಂಧನ
ಮಡಿಕೇರಿ: ಕಟ್ಟೆಮಾಡು ಗ್ರಾಮದ ಶ್ರೀ ಮಹಾ ಮೃತುಂಜಯ ದೇವಾಲಯದಲ್ಲಿ ವಸ್ತ್ರ ಸಂಹಿತೆ ವಿಚಾರದಲ್ಲಿ ಉಂಟಾದ ಗೊಂದಲದ ಬಳಿಕ ಎರಡು ಸಮುದಾಯಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಅವಹೇಳನ ಮಾಡುತ್ತಿರುವುದು ಕಂಡು ಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಎರಡು ಪ್ರತ್ಯೇಕ ದೂರುಗಳನ್ನು ಆಧರಿಸಿ ಅನುದೀಪು ಹಾಗೂ ಅಯ್ಯಪ್ಪ ಎಂಬಿಬ್ಬರ ವಿರುದ್ಧ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.
ಗುರುವಾರ ಎಸ್ಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ, ಯಾವುದೇ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡುವುದು ಕಂಡು ಬಂದಲ್ಲಿ ಪೊಲೀಸ್ ಇಲಾಖೆ ಸುಮೊಟೊ ಕೇಸ್ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ದೇವಾಲಯದ ವಿಚಾರದ ಕುರಿತು ಎರಡೂ ಸಮುದಾಯಗಳ ಮುಖಂಡರ ಜೊತೆಯಲ್ಲಿ ಶಾಂತಿಸಭೆ ನಡೆಸಿ ಪರಸ್ಪರ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಈಗಾಗಲೇ ಸೂಚಿಸಲಾಗಿದೆ. ಎರಡೂ ಸಮುದಾಯದ ಮುಖಂಡರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಯಾರೂ ಇಂತಹ ಕೃತ್ಯಗಳಲ್ಲಿ ಪಾಲ್ಗೊಳ್ಳದಂತೆ ಆಯಾ ಸಮುದಾಯದ ಪ್ರಮುಖರು ಹಾಗೂ ಹಿರಿಯರು ಕರೆ ನೀಡಿಬೇಕೆಂದು ಎಸ್ಪಿ ಮನವಿ ಮಾಡಿದರು.