ಕೊಡಗು | ಸಾಂಪ್ರದಾಯಿಕ ಉಡುಪು ವಿಚಾರಕ್ಕೆ ಸಂಘರ್ಷ : ಕಟ್ಟೆಮಾಡು ಗ್ರಾಮದಲ್ಲಿ ನಿಷೇಧಾಜ್ಞೆ
ಮಡಿಕೇರಿ : ತಾಲೂಕಿನ ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ದೇವಸ್ಥಾನದಲ್ಲಿ ಡಿ.27ರಂದು ಜಾತ್ರೋತ್ಸವದ ಸಂದರ್ಭ ಎರಡು ಗುಂಪುಗಳ ನಡುವೆ ಸಂಘರ್ಷ ಏರ್ಪಟ್ಟ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದೆ
ಶ್ರೀ ಮಹಾಮೃತ್ಯುಂಜಯ ದೇವಾಲಯದ ಸುತ್ತಮುತ್ತಲಿನ 5 ಕಿ.ಮೀ. ವ್ಯಾಪ್ತಿಯಲ್ಲಿನ ಪ್ರದೇಶವನ್ನು 2024 ಡಿ.30ರ ಬೆಳಗ್ಗೆ 6 ಗಂಟೆಯಿಂದ 2025 ಜನವರಿ 2ರ ಬೆಳಿಗ್ಗೆ 6 ಗಂಟೆಯವರೆಗೆ 5ಕ್ಕಿಂತ ಹೆಚ್ಚು ಜನ ಗುಂಪು ಸೇರದಂತೆ ಪ್ರತಿಭಟನೆ, ಮೆರವಣಿಗೆ, ರ್ಯಾಲಿ, ಜಾಥಾ ನಡೆಸದಂತೆ ಮತ್ತು ಪ್ರಚೋದನಾತ್ಮಕ ಘೋಷಣೆ ಕೂಗದಂತೆ ನಿರ್ಬಂಧಿತ ಪ್ರದೇಶ ಎಂದು ಘೋಷಿಸಿ ಆದೇಶಿಸಿದೆ. ಕಾನೂನು ಸುವ್ಯವಸ್ಥೆ ಮತ್ತು ಆಂತರಿಕ ಭದ್ರತೆ ದೃಷ್ಟಿಯಿಂದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163ರಡಿ ದತ್ತವಾದ ಅಧಿಕಾರದಂತೆ ಉಪವಿಭಾಗಾಧಿಕಾರಿ ನರ್ವಡೆ ವಿನಾಯಕ್ ಕಾರ್ಭಾರಿ ಅವರು ಆದೇಶ ಹೊರಡಿಸಿದ್ದಾರೆ.
ಘಟನೆಯ ಹಿನ್ನೆಲೆ :
ಡಿ.27ರಂದು ಜಾತ್ರೋತ್ಸವಕ್ಕೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಬಂದ ಕೊಡವರನ್ನು ಕೆಲವರು ತಡೆದಿದ್ದಾರೆ. ಕೊಡವ ಉಡುಪು ಕುಪ್ಯಚೇಲೆಯನ್ನು ಕಳಚುವಂತೆ ಒತ್ತಡ ಹೇರಿದ್ದಾರೆ ಎನ್ನುವ ಆರೋಪವಿದೆ.
ಇದರಿಂದ ಅಸಮಾಧಾನಗೊಂಡ ಕೊಡವ ಸಮುದಾಯದ ಮಂದಿ ಡಿ.30ರಂದು ಶ್ರೀ ಮಹಾಮೃತ್ಯುಂಜಯ ದೇವಾಲಯಕ್ಕೆ ಜಾಥಾ ನಡೆಸಲು ನಿರ್ಧರಿಸಿದ್ದರು. ಈ ನಡುವೆ ಗೌಡ ಸಮುದಾಯದವರೂ ಡಿ.30ರಂದು ದೇವಾಲಯಕ್ಕೆ ದೊಡ್ಡ ಸಂಖ್ಯೆಯಲ್ಲಿ ತೆರಳಲು ಗೌಡ ಸಮಾಜದ ಸಭೆಯಲ್ಲಿ ಕೂಡ ನಿರ್ಣಯ ಕೈಗೊಂಡಿದ್ದರು. ಇದನ್ನು ಮನಗಂಡ ಕೊಡಗು ಜಿಲ್ಲಾಡಳಿತ ಕಾನೂನು ಸುವ್ಯವಸ್ಥೆ ಕಾಪಾಡಲು ನಿಷೇಧಾಜ್ಞೆ ಜಾರಿಗೊಳಿಸಿದೆ