ವೀರ ಸೇನಾನಿಗಳಾದ ಕೆ.ಎಂ.ಕಾರ್ಯಪ್ಪ, ಕೆ.ಎಸ್.ತಿಮ್ಮಯ್ಯಗೆ ಅವಮಾನ ಮಾಡಿದ ವ್ಯಕ್ತಿಯ ಗಡಿಪಾರಿಗೆ ಆಗ್ರಹಿಸಿ 6 ಗಂಟೆ ಕೊಡಗು ಬಂದ್
ಮಡಿಕೇರಿ : ವೀರ ಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಮಾನಿಸಿದ ವ್ಯಕ್ತಿಯನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಕೊಡಗು ಸರ್ವ ಜನಾಂಗಗಳ ಒಕ್ಕೂಟ ಕರೆ ನೀಡಿದ್ದ ಆರು ಗಂಟೆಗಳ ಕೊಡಗು ಬಂದ್ ಗೆ ಭಾಗಶಃ ಸ್ಪಂದನ ದೊರಕಿತು.
ಜಿಲ್ಲೆಯ ಬಹುತೇಕ ಕಡೆ ಅಂಗಡಿ ಮುಂಗಟ್ಟು, ಖಾಸಗಿ ಸಂಸ್ಥೆಗಳು, ವಾಣಿಜ್ಯ ಸಂಕೀರ್ಣಗಳು, ಹೊಟೇಲ್ ಸೇರಿದಂತೆ ವಿವಿಧ ವ್ಯಾಪಾರೋದ್ಯಮಗಳು ಬಂದ್ ಆಗಿದ್ದವು. ಬೆರಳೆಣಿಕೆಯಷ್ಟು ಅಂಗಡಿ ಮತ್ತು ಹೊಟೇಲ್ ಗಳು ತೆರೆದಿದ್ದು, ಪೆಟ್ರೋಲ್ ಬಂಕ್ ಗಳು ಕಾರ್ಯನಿರ್ವಹಿಸಿದವು. ವಾಹನಗಳು, ಸರಕಾರಿ ಬಸ್ ಗಳು ಎಂದಿನಂತೆ ಸಂಚರಿಸಿದವು. ಖಾಸಗಿ ಬಸ್ ಗಳ ಸಂಚಾರ ಸ್ಥಗಿತಗೊಂಡಿತ್ತು. ಶೇ.50 ರಷ್ಟು ಆಟೋರಿಕ್ಷಾಗಳು ಸಂಚರಿಸಿದವು. ಸರಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು.
ಮಡಿಕೇರಿ, ಕುಶಾಲನಗರ, ಸುಂಟಿಕೊಪ್ಪ, ಸೋಮವಾರಪೇಟೆ, ನಾಪೋಕ್ಲು, ವಿರಾಜಪೇಟೆ, ಪೊನ್ನಂಪೇಟೆ, ಗೋಣಿಕೊಪ್ಪಲು ಮೊದಲಾದೆಡೆ ಬಂದ್ ಗೆ ಸ್ಪಂದನೆ ದೊರೆಯಿತು. ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಬಂದ್ ಗೆ ಕರೆ ನೀಡಲಾಗಿತ್ತು.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಹಾಲು, ಹಣ್ಣು ಹಂಪಲು, ಔಷಧಿ ಅಂಗಡಿಗಳನ್ನು ಹೊರತು ಪಡಿಸಿದಂತೆ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು.
ಜಿಲ್ಲಾಡಳಿತಕ್ಕೆ ಮನವಿ :
ಕೊಡಗು ಸರ್ವ ಜನಾಂಗಗಳ ಒಕ್ಕೂಟದ ಸಂಚಾಲಕ ರಾಜೀವ್ ಬೋಪಯ್ಯ ಅವರ ನೇತೃತ್ವದಲ್ಲಿ ಗುರುವಾರ ಮಧ್ಯಾಹ್ನ ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದಲ್ಲಿ ಕೆಲ ಕಾಲ ರಸ್ತೆ ತಡೆ ಪ್ರತಿಭಟನೆ ನಡೆಯಿತು.
ಈ ಸಂದರ್ಭ ಮಾತನಾಡಿದ ರಾಜೀವ್ ಬೋಪಯ್ಯ, ಇಡೀ ವಿಶ್ವದ ಗೌರವಾದರಗಳಿಗೆ ಪಾತ್ರರಾಗಿರುವ ಕೊಡಗಿನ ಹೆಮ್ಮೆಯ ವೀರ ಸೇನಾನಿಗಳಾದ ಫೀ.ಮಾ.ಕೆ.ಎಂ. ಕಾರ್ಯಪ್ಪ ಮತ್ತು ಜ.ಕೆ.ಎಸ್.ತಿಮ್ಮಯ್ಯ ಅವರನ್ನು ಅವಹೇಳನ ಮಾಡಿರುವುದು ಖಂಡನೀಯ. ಇದಕ್ಕೆ ಕಾರಣರಾದವರನ್ನು ಗಡಿಪಾರು ಮಾಡಬೇಕು ಮತ್ತು ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಬೇಕು. ಇದಕ್ಕೆ ಸೂಕ್ತ ಸ್ಪಂದನ ದೊರಕದಿದ್ದಲ್ಲಿ ಕುಟ್ಟದಿಂದ ಮಡಿಕೇರಿಯವರೆಗೆ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳುವುದಾಗಿ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನಂತರ ಮೆರವಣಿಗೆಯ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿದ ಒಕ್ಕ್ಕೂಟದ ಪದಾಧಿಕಾರಿಗಳು ಹಾಗೂ ವಿವಿಧ ಸಮಾಜ, ಸಂಘ ಸಂಸ್ಥೆಗಳ ಪ್ರಮುಖರು ಹೆಚ್ಚುವರಿ ಜಿಲ್ಲಾಧಿಕಾರಿ ಐಶ್ವರ್ಯ ಅವರಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು.
ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ, ಮಾಜಿ ಸೈನಿಕ ಪ್ಯಾರಾಟ್ರೂಪರ್ ಬೊಟ್ಟಂಗಡ ಜಪ್ಪು, ಕೊಡಗು ಏಕೀಕರಣ ರಂಗದ ತಮ್ಮು ಪೂವಯ್ಯ, ರಾಬಿನ್ ದೇವಯ್ಯ, ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ದಿನೇಶ್ ಕಾರ್ಯಪ್ಪ, ಸುಲೇಮಾನ್, ನಜೀರ್, ಶರತ್, ಜಗದೀಶ್ ರೈ, ಕುಪ್ಪಂಡ ವಸಂತ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.