ʼಕಾಫಿ ದಸರಾʼ ಉದ್ಘಾಟನೆ | ಕಾಫಿ ಬೆಳೆಗಾರರಿಗೆ ನೆರವು : ಕೃಷಿ ಸಚಿವ ಚಲುವರಾಯಸ್ವಾಮಿ ಭರವಸೆ

Update: 2024-10-06 12:12 GMT

ಮಡಿಕೇರಿ : ಕೃಷಿ ಇಲಾಖೆಯ ವ್ಯಾಪ್ತಿಗೆ ಮತ್ತು ರಾಜ್ಯ ಸರಕಾರದ ಅಧೀನಕ್ಕೆ ಕಾಫಿ ಕೃಷಿ ಬರುವುದಿಲ್ಲ. ಆದರೂ ಕಾಫಿ ಬೆಳೆಯುವವರು ಕೃಷಿಕರೇ ಆಗಿರುವುದರಿಂದ ಬೆಳೆಗಾರರಿಗೆ ಅಗತ್ಯ ನೆರವನ್ನು ಒದಗಿಸುವ ಕುರಿತು ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಕೃಷಿ ಸಚಿವ ಚಲುವರಾಯಸ್ವಾಮಿ ಭರವಸೆ ನೀಡಿದ್ದಾರೆ.

ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದಲ್ಲಿ ಇದೇ ಪ್ರಥಮ ಬಾರಿಗೆ ಗಾಂಧಿ ಮೈದಾನದಲ್ಲಿ ಆಯೋಜಿಸಿರುವ ‘ಕಾಫಿ ದಸರಾ’ವನ್ನು ಕಲಾ ಸಂಭ್ರಮ ವೇದಿಕೆಯಲ್ಲಿ ದೊಡ್ಡ ಕಪ್ ಮಾದರಿಗೆ ಕಾಫಿ ಸುರಿಯುವ ಮೂಲಕ ಉದ್ಘಾಟಸಿ ಸಚಿವರು ಮಾತನಾಡಿದರು.

ʼಕಾಫಿ ಬೆಳೆ ಕೊಡಗಿನ ಆರ್ಥಿಕತೆಯ ಬೆನ್ನೆಲುಬಾಗಿದೆ, ಕಾಫಿ ಬೆಳೆಗಾರರು ಸೇರಿದಂತೆ ಎಲ್ಲಾ ಕೃಷಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಸದಾ ಸಿದ್ಧವಿದೆʼ ಎಂದರು.

ಜಲಾಶಯವನ್ನು ಆಶ್ರಯಿಸಿ ರಾಜ್ಯದ ವಿವಿಧೆಡೆಗಳಲ್ಲಿ ಭತ್ತದ ಕೃಷಿ ಮಾಡಲಾಗುತ್ತದೆ. ಹಲವಾರು ಬಾರಿ ಕೃಷಿ ಚಟುವಟಿಕೆಗಳ ಆರಂಭಿಕ ಹಂತದಲ್ಲಿ ಲಭ್ಯವಿರುವ ನೀರು ಫಸಲು ಕೈಗೆ ಬರುವ ಹಂತದಲ್ಲಿ ಲಭ್ಯವಿಲ್ಲದೆ ಕೃಷಿಕರು ಸಂಕಷ್ಟಕ್ಕೆ ಸಿಲುಕುತ್ತಾರೆ. ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಕೃಷಿ ಹೊಂಡಗಳನ್ನು ತೆಗೆಯಲು ರಾಜ್ಯ ಸರಕಾರ ನಿರ್ಧಾರ ಕೈಗೊಂಡಿದೆ. ಈ ಕೃಷಿ ಹೊಂಡಗಳು ನೀರಿಲ್ಲದ ಸಂದರ್ಭಗಳಲ್ಲಿ ಕೃಷಿಕರ ನೆರವಿಗೆ ಬರಲಿದೆ ಎಂದರು.

ಕಾವೇರಿ ನದಿಯ ಮೂಲಕ ನೀರುಣಿಸುವ ಕೊಡಗು, ಮುಂಗಾರಿನ ಅವಧಿಯಲ್ಲಿ ಅತಿ ವೃಷ್ಟಿಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗುತ್ತದೆ. ಇಂತಹ ಯಾವುದೇ ಸಂದರ್ಭಗಳಲ್ಲಿ ಕೊಡಗಿನ ಜನತೆಯ ಸಂಕಷ್ಟಗಳ ನಿವಾರಣೆಯ ಜವಾಬ್ದಾರಿಯನ್ನು ರಾಜ್ಯ ಸರಕಾರ ತೆಗೆದುಕೊಳ್ಳುತ್ತದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಚಿವ ದಿನೇಶ್ ಗುಂಡೂರಾವ್, ʼಯಾವುದೇ ಪ್ರದೇಶ ಆಧುನೀಕತೆಯಿಂದ ಹೊರಗಿರಲು ಸಾಧ್ಯವಿಲ್ಲ. ಯಾವುದೇ ಬದಲಾವಣೆಗಳ ಸಂದರ್ಭ ನಮ್ಮ ಮೂಲ ಸಂಸ್ಕೃತಿಯನ್ನು ಕೈ ಬಿಡದೆ ಸಮತೋಲನದ ಅಭಿವೃದ್ಧಿಯನ್ನು ಸಾಧಿಸಬೇಕಾಗಿದೆʼ ಎಂದರು.

ಕಾಫಿ ಕೃಷಿ ಮತ್ತು ಉದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ, ಇಲ್ಲಿ ಬೆಳೆಯುವ ಕಾಫಿಯ ‘ಬ್ರಾಂಡ್’ಗಳನ್ನು ಹುಟ್ಟು ಹಾಕುವ, ಆಂತರಿಕ ಕಾಫಿ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಯೋಜನೆಯನ್ನು ರೂಪಿಸುವ ಅಗತ್ಯವಿದೆ. ಇಂತಹ ಪ್ರಯತ್ನ ಕಾಫಿ ಬೆಳೆಗಾರರಿಗೆ ಅನುಕೂಲ ಒದಗಿಸಬಲ್ಲುದು ಎಂದು ಹೇಳಿದರು.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ, ʼಮಡಿಕೇರಿ ದಸರಾದಲ್ಲಿ ಕಾಫಿ ಕೃಷಿಗೆ ಆದ್ಯತೆ ನೀಡಿ ಕಾರ್ಯಕ್ರಮ ರೂಪಿಸಿರುವುದು ಶ್ಲಾಘನೀಯ. ಮುಂದಿನ ವರ್ಷಗಳಲ್ಲಿ ಕಾಫಿಗೆ ಹೆಚ್ಚಿನ ಒತ್ತು ನೀಡಿ, ಕಾಫಿ ದಸರಾ ನಡೆಸುವ ಮೂಲಕ, ಕಾಫಿಯ ಮಹತ್ವವನ್ನು ನಾಡಿನುದ್ದಕ್ಕೂ ಪಸರಿಸುವ ಕೆಲಸವಾಗಲಿ, ಎಂದು ಹಾರೈಸಿದರು.

ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ʼಕಾಫಿ ಕೃಷಿಯನ್ನು ಅವಲಂಬಿಸಿರುವ ಬೆಳೆಗಾರರು ಸಂಕಷ್ಟದಲ್ಲಿದ್ದು, ಅವರಿಗೆ ನೆರವಾಗಬೇಕು. ಕೊಡಗಿನ ಕೃಷಿ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಭತ್ತದ ಕೃಷಿ ಭೂಮಿಗಳ ಭೂಪರಿವರ್ತನೆಗೆ ಅವಕಾಶ ಮಾಡಿಕೊಡಬೇಡಿʼ ಎಂದು ಸಚಿವರಲ್ಲಿ ಮನವಿ ಮಾಡಿದರು.

ಮಡಿಕೇರಿ ದಸರಾ ಸಮಿತಿ ಮತ್ತು ಸಾಂಸ್ಕೃತಿಕ ಸಮಿತಿಯ ವತಿಯಿಂದ ಇದೇ ಸಂದರ್ಭ ಸಚಿವರುಗಳಾದ ಚಲುವರಾಯಸ್ವಾಮಿ, ದಿನೇಶ್ ಗುಂಡೂರಾವ್ ಹಾಗೂ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವ ವೃಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಜಿಲ್ಲಾಧಿಕಾರಿ ವೆಂಕಟ್ ರಾಜಾ, ಉಪವಿಭಾಗಾಧಿಕಾರಿ ವಿನಾಯಕ ನರ್ವಾಡೆ, ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಕೆ.ರಾಜೀವ್, ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ನಂದಾ ಬೆಳ್ಯಪ್ಪ, ಮಹಿಳಾ ಕಾಫಿ ಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿ ಅನಿತಾ ನಂದ, ಕಾಫಿ ಮಂಡಳಿ ಸದಸ್ಯರಾದ ತಳೂರು ಕಿಶೋರ್ ಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮತಿಯ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಉಪಾಸಿಯ ಮಾಜಿ ಅಧ್ಯಕ್ಷರಾದ ವಿನೋದ್ ಶಿವಪ್ಪ, ಮಡಿಕೇರಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ವೈ.ರಾಜೇಶ್ ಯಲ್ಲಪ್ಪ, ಅಮೇರಿಕಾದ ಅಕ್ಕ ಸಂಘಟನೆಯ ಪ್ರಮುಖರಾದ ಬಸವರಾಜ ಗೌಡ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಹೆಚ್.ಟಿ. ಸ್ವಾಗತಿಸಿ, ವಿನೋದ್ ಮೂಡಗದ್ದೆ ಕಾರ್ಯಕ್ರಮ ನಿರೂಪಿಸಿದರು.

ಕಾಫಿ ದಸರಾದಲ್ಲಿ ಕೃಷಿ ಇಲಾಖೆ, ಕಾಫಿ ಮಂಡಳಿ, ತೋಟಗಾರಿಕಾ ಇಲಾಖೆ, ಹಾಸನ ಹಾಲು ಒಕ್ಕೂಟ, ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ, ಕೊಡಗು ಜಿಲ್ಲಾ ಹಾಪ್ ಕಾಮ್ಸ್, ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘ, ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ, ಲೆವಿಸ್ಟಾ ಕಾಫಿ ಸಂಸ್ಥೆ, ಸ್ಥಳೀಯ ಶರ್ಮಾ ಕಾಫಿ ವರ್ಕ್ಸ್, ಬಯೋಟೆಕ್ ಕೂರ್ಗ್ ಸಂಸ್ಥೆಗಳು ಮಳಿಗೆಗಳನ್ನು ತೆರೆದು ಕಾಫಿ ಸೇರಿದಂತೆ ವಿವಿಧ ಕೃಷಿಗೆ ಪೂರಕವಾದ ಸಾಮಾಗ್ರಿಗಳು ಮತ್ತು ಮಾಹಿತಿಯನ್ನು ಕೃಷಿಕರಿಗೆ ಒದಗಿಸಿದರು.

Full View

Delete Edit
Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News