ಕೊಡಗಿನ ಪ್ರೊ.ಪದ್ಮಾ ಶೇಖರ್‌ಗೆ ʼಕನ್ನಡ ರಾಜ್ಯೋತ್ಸವ ಪ್ರಶಸ್ತಿʼ
ಮಡಿಕೇರಿ : ಸಾಹಿತಿಗಳು, ಶಿಕ್ಷಣ ತಜ್ಞರು, ಸಂಶೋಧಕರು ಹಾಗೂ ವಿಶ್ರಾಂತ ಕುಲಪತಿಗಳಾದ ಕೊಡಗಿನ ಮೂಲದ ಪ್ರೊ.ಪದ್ಮಾ ಶೇಖರ್ ಅವರು ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಈ ಬಾರಿಯ ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕುಶಾಲನಗರ ತಾಲ್ಲೂಕಿನ ತೊರೆನೂರಿನವರಾದ ಪ್ರೊ.ಪದ್ಮಾ ಶೇಖರ್ ಅವರು, ಬೆಂಗಳೂರಿನ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾಗಿದ್ದಾರೆ. ಸಾಹಿತ್ಯ, ಸಂಶೋಧನೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ಸಲ್ಲಿಸಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ಜೈನಶಾಸ್ತ್ರ ಮತ್ತು ಪ್ರಾಕೃತ ವಿಭಾಗದ ಪ್ರಾಧ್ಯಾಪಕರು ಮತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಇವರು, ಮೈಸೂರು ವಿವಿ ಮಹಿಳಾ ಅಧ್ಯಯನದ ನಿರ್ದೇಶಕರು, ಮೈಸೂರು ವಿವಿ ಕ್ರೈಸ್ತಶಾಸ್ತ್ರ ವಿಭಾಗದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ತಮ್ಮ ಶೈಕ್ಷಣಿಕ ಕಾರ್ಯಚಟುವಟಿಕೆಗಳೊಂದಿಗೆ ಇವರು ಜೀವನ ಚರಿತ್ರೆ, ವಿಮರ್ಶೆ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ತಮ್ಮನ್ನು ಗಾಢವಾಗಿ ತೊಡಗಿಸಿಕೊಂಡವರು. ಜೈನಶಾಸ್ತ್ರದ ಕುರಿತು, ಕನ್ನಡ ಮತ್ತು ಪ್ರಾಕೃತ ಸಂಬಂಧಗಳು, ಕನ್ನಡ ಛಂದಸ್ಸುಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿ ಸಂಶೋಧನಾ ಗ್ರಂಥಗಳನ್ನು ಹೊರ ತಂದವರಾಗಿದ್ದಾರೆ. ಇವುಗಳೊಂದಿಗೆ ‘ಹಕ್ಕಿಯ ಹರಯ’, ‘ಉರಿಯ ಚಪ್ಪರ’ ಎನ್ನುವ ಕವನ ಸಂಕಲನವನ್ನು ಹೊರ ತಂದಿರುವುದು ವಿಶೇಷ.
ಈ ಹಿಂದೆ ಮಡಿಕೇರಿ ತಾಲ್ಲೂಕಿನ ಮೂರ್ನಾಡಿನಲ್ಲಿ ನಡೆದ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.
ಪ್ರೊ.ಪದ್ಮ ಶೇಖರ್ ಅವರು ಸಂಶೋಧನೆ ಮತ್ತು ಸಾಹಿತ್ಯ ಕೃಷಿಗಾಗಿ ಹಲವು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಪ್ರಮುಖವಾಗಿ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಶ್ರೀ ಚೌಡಯ್ಯ ಸಾಹಿತ್ಯ ಪ್ರಶಸ್ತಿ ಒಳಗೊಂಡಂತೆ 18 ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ ಪದ್ಮಾ ಶೇಖರ್ ಅವರು ಮೈಸೂರಿನಲ್ಲಿ ವಿಶ್ರಾಂತ ಜೀವನನವನ್ನು ಸಾಗಿಸುತ್ತಿದ್ದಾರೆ.