ಕಾರ್ಯಕರ್ತರ ಅಭಿಪ್ರಾಯಕ್ಕೆ ಬಿಜೆಪಿ ಮನ್ನಣೆ ನೀಡುತ್ತಿಲ್ಲ: ಮಾಜಿ ಶಾಸಕ ರಘುಪತಿ ಭಟ್

Update: 2024-05-24 09:43 GMT

ಮಡಿಕೇರಿ ಮೇ 24: "ಬಿಜೆಪಿ ತನ್ನ ಸಿದ್ಧಾಂತವನ್ನು ಪಾಲಿಸುತ್ತಿಲ್ಲ, ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತಿಲ್ಲ. ಪಕ್ಷಕ್ಕಾಗಿ ದುಡಿದ ಹಿರಿಯರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದರೆ ನಾನು ಸ್ಪರ್ಧಿಸುತ್ತಿರಲಿಲ್ಲ. ಗೆಲ್ಲುವುದಕ್ಕಾಗಿ ನಾನು ಸ್ಪರ್ಧೆಗಿಳಿದಿದ್ದೇನೆಯೇ ಹೊರತು ಯಾರನ್ನೂ ಸೋಲಿಸುವುದಕ್ಕಾಗಿ ಅಲ್ಲ ಎಂದು ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಹಾಗೂ ಉಡುಪಿಯ ಮಾಜಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ನನಗೆ ಟಿಕೆಟ್ ಕೈತಪ್ಪಿದೆ. ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಅವಕಾಶ ದೊರೆಯಲಿಲ್ಲ. ಈ ಕಾರಣದಿಂದ ಕಾರ್ಯಕರ್ತರ ಅಭಿಪ್ರಾಯ ಮತ್ತು ಒತ್ತಡದ ಹಿನ್ನೆಲೆ ಬಿಜೆಪಿ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿಯಾಗಿ ನೈರುತ್ಯ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ. ರಾಜಕಾರಣಿಯಾದ ನನಗೆ ಜನಸೇವೆಗೆ ಈ ಸ್ಪರ್ಧೆ ಅನಿವಾರ್ಯವಾಗಿತ್ತು ಎಂದು ತಿಳಿಸಿದರು.

"ಮೂರು ಬಾರಿ ಟಿಕೆಟ್ ತಪ್ಪಿದೆ, ಯಾರು ತಪ್ಪಿಸಿದ್ದಾರೆ ಮತ್ತು ಯಾಕಾಗಿ ತಪ್ಪಿಸಿದ್ದಾರೆ ಎನ್ನುವ ಬಗ್ಗೆ ನನಗೆ ಇಲ್ಲಿಯವರೆಗೆ ಸ್ಪಷ್ಟ ಉತ್ತರ ದೊರೆತ್ತಿಲ್ಲ. ಬಿಜೆಪಿ ನನಗೆ ಸರ್ವೋಚ್ಛ. ಪಕ್ಷದ ನೋಟಿಸ್ ಕೈಸೇರಿದ ತಕ್ಷಣ ಸರಿಯಾದ ಉತ್ತರವನ್ನು ನೀಡುತ್ತೇನೆ. ಶಿಸ್ತು ಸಮಿತಿಯ ವಿಚಾರಣೆಗೆ ಹಾಜರಾಗಿ ಕಾರ್ಯಕರ್ತರಿಗೆ ಆಗಿರುವ ನೋವನ್ನು ವಿವರಿಸುತ್ತೇನೆ. ಪಕ್ಷಕ್ಕಾಗಿ ಅನೇಕ ವರ್ಷಗಳಿಂದ ದುಡಿದ ಪ್ರಾಮಾಣಿಕ ಕಾರ್ಯಕರ್ತರಿಗೆ ಸ್ಪರ್ಧಿಸಲು ಅವಕಾಶ ನೀಡಿದ್ದರೆ ನಾನು ಸ್ಪರ್ಧೆಗಿಳಿಯುತ್ತಿರಲಿಲ್ಲ. ಕೇವಲ ಒಂದೂವರೆ ವರ್ಷದ ಹಿಂದೆ ಬಿಜೆಪಿಗೆ ಬಂದು ಸೇರಿದವರಿಗೆ ಟಿಕೆಟ್ ನೀಡಿರುವ ಬಗ್ಗೆ ಕಾರ್ಯಕರ್ತರಿಗೂ ನೋವಿದೆ. ನಾನು ಗೆದ್ದು ಬಂದ ನಂತರ ವಿಧಾನ ಪರಿಷತ್ ನ ಬಿಜೆಪಿ ಸದಸ್ಯನಾಗಿಯೇ ಉಳಿಯಲಿದ್ದೇನೆ ಎಂದರು.

ನಾನು ರಾಷ್ಟ್ರೀಯತೆ ಮತ್ತು ಹಿಂದುತ್ವದ ಪರವಾಗಿರುವವನೇ ಹೊರತು ಯಾವುದೇ ಧರ್ಮದ ವಿರೋಧಿಯಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರದ ಪರವಾಗಿ ಹಿಜಾಬ್ ವಿರುದ್ಧ ಹೋರಾಟ ನಡೆಸಿದ್ದೇನೆ. ಪರಿವಾರದ ಪರ ಕೆಲಸ ಮಾಡುವವರಿಗೆ ಬಿಜೆಪಿ ಟಿಕೆಟ್ ತಪ್ಪುತ್ತಿರುವುದು ಗಮನಕ್ಕೆ ಬಂದಿದೆ. ಕೆ.ಎಸ್.ಈಶ್ವರಪ್ಪ, ಅನಂತಕುಮಾರ್ ಹೆಗಡೆ, ಪ್ರತಾಪ್ ಸಿಂಹ, ನನಗೆ ಸೇರಿದಂತೆ ಇನ್ನೂ ಕೆಲವರಿಗೆ ಟಿಕೆಟ್ ಸಿಕ್ಕಿಲ್ಲ. ಇದಕ್ಕೆ ಕಾರಣ ಏನು ಎನ್ನುವುದನ್ನು ತಿಳಿದುಕೊಳ್ಳಬೇಕಾಗಿದೆ ಎಂದು ಕೆ.ರಘುಪತಿ ಭಟ್ ತಿಳಿಸಿದರು.

ಉಡುಪಿ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ ತೃಪ್ತಿ ನನಗಿದೆ. ರಾಷ್ಟ್ರ ಮಟ್ಟದಲ್ಲಿ ನನ್ನ ಅಭಿವೃದ್ಧಿ ಕಾರ್ಯಗಳು ಗಮನ ಸೆಳೆದಿದೆ. ಈ ಅಭಿವೃದ್ಧಿ ಕಾರ್ಯಗಳೇ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ನನಗೆ ಗೆಲುವು ತಂದು ಕೊಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಬಾರಿಯೂ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳಿಂದ ಗೆಲ್ಲುವ ಎಲ್ಲಾ ಅವಕಾಶಗಳಿದ್ದರೂ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪಕ್ಷ ಸೂಚಿಸಿದ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಿ ಅವರ ಗೆಲುವಿಗಾಗಿ ಶ್ರಮಿಸಿದ್ದೇನೆ. ಹಿಂದಿನಿಂದಲೂ ಶಿಕ್ಷಣ ಕ್ಷೇತ್ರ ನನ್ನ ಆಸಕ್ತಿಯ ವಿಷಯ ಆಗಿರುವ ಕಾರಣಕ್ಕೆ ಮೊದಲ ಬಾರಿ ಶಾಸಕನಾದಾಗಲೇ ’ಸಾಧಕ ಶಿಕ್ಷಕ ಪ್ರಶಸ್ತಿ’ ಆರಂಭಿಸಿ ಅಂಕಗಳ ಆಧಾರದ ಮೇಲೆ ಸಾಧನೆಗೈದ ಶಾಲೆಗಳನ್ನು ಗುರುತಿಸಿ ನೂರಾರು ಶಿಕ್ಷಕರನ್ನು ನಗದು ಪುರಸ್ಕಾರದ ಮೂಲಕ ಗೌರವಿಸಿದ ತೃಪ್ತಿ ನನಗಿದೆ. ಅಲ್ಲದೆ 2006ರಲ್ಲಿ ನಾನು ಆರಂಭಿಸಿದ ಯಕ್ಷ ಶಿಕ್ಷಣ ಟ್ರಸ್ಟ್ ಮೂಲಕ ಕ್ಷೇತ್ರದ ಎಲ್ಲಾ ಪ್ರೌಢ ಶಾಲೆಗಳಲ್ಲಿ ಯಕ್ಷಗಾನ ತರಬೇತಿ ಆರಂಭಿಸಿ ವರ್ಷಕ್ಕೆ 1500ಕ್ಕೂ ಹೆಚ್ಚು ಜಿಲ್ಲಾ ಹಾಗೂ ಹೊರ ಜಿಲ್ಲೆಯ ಮಕ್ಕಳು ಈ ಟ್ರಸ್ಟ್ ಮೂಲಕ ಯಕ್ಷಗಾನ ತರಬೇತಿ ಪಡೆಯುತ್ತಿರುವುದು ನಮಗೆ ಹೆಮ್ಮೆ ಎನಿಸಿದೆ.

ಅಲ್ಲದೆ ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂದಿನ ಉನ್ನತ ಶಿಕ್ಷಣ ಸಚಿವರಾದ ಅರವಿಂದ ಲಿಂಬಾವಳಿಯವರಲ್ಲಿ ಮನವಿ ಮಾಡಿ ರಾಜ್ಯದಲ್ಲೇ ಪ್ರಥಮ ಎಂಬಂತೆ ಸ್ನಾತಕೋತ್ತರ ಪದವಿ ಕಾಲೇಜು ಆರಂಭಗೊಳಿಸಲಾಯಿತು. ಇಂದು ಹಲವಾರು ವಿದ್ಯಾರ್ಥಿಗಳ ಜೀವನ ರೂಪಿಸಲು ಅನುಕೂಲವಾಗಿದೆ.

ಇದೀಗ ನೈರುತ್ಯ ಪದವೀಧರರ ಕ್ಷೇತ್ರದಿಂದ ನಾನು ಉಮೇದುವಾರಿಕೆಯನ್ನು ಸಲ್ಲಿಸಿದ್ದು, ಪದವೀಧರರಿಗೆ ಪದವಿಯ ನಂತರ ಕಾಡುವ ಉದ್ಯೋಗಕ್ಕೆ ನೆಟ್ವರ್ಕ್ ಡಾಟಾಬೇಸ್ಗಳ ಸ್ಥಾಪನೆ, ಸರಕಾರಿ ಹುದ್ದೆಗಳ ಪರೀಕ್ಷೆ ನಡೆದ ಕಾಲಮಿತಿಯಲ್ಲಿ ಫಲಿತಾಂಶಗಳ ಪ್ರಕಟ ಹಾಗೂ ಕ್ಷಿಪ್ರ ನೇಮಕಾತಿಗಾಗಿ ಒತ್ತಾಯ. ಅಲ್ಲದೇ ಪದವೀದರರಿಗೆ ಸ್ವ ಉದ್ಯೋಗಕ್ಕಾಗಿ ಸಾಲ ಮುಂತಾದವುಗಳ ಸರಕಾರಿ ಸಹಾಯಗಳಿಗೆ ಸಿಂಗಲ್ ವಿಂಡೋ ಸ್ಥಾಪನೆ, ಪದವೀಧರರಿಗೆ ಕನಿಷ್ಟ ಒಂದು ಕೌಶಲ್ಯ ತರಬೇತಿ, ಸ್ಥಳೀಯ ಜಿಲ್ಲೆಗಳಲ್ಲಿ ಉದ್ಯಮ ಬಯಸುವ ಪದವೀದರರಿಗೆ ಪೂರಕ ಉದ್ಯಮವಲಯದ ಸೃಷ್ಟಿಗೆ ಕ್ರಮಕ್ಕಾಗಿ ಸರಕಾರದ ಮಟ್ಟದಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ರಘುಪತಿ ಭಟ್ ಭರವಸೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News