ವ್ಯಾಪಕ ಮಳೆ | ಹಾರಂಗಿ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಬಿಡುಗಡೆ

Update: 2024-07-14 15:19 GMT

ಮಡಿಕೇರಿ : ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಿದ್ದರಿಂದ 5 ಸಾವಿರ ಕ್ಯೂಸೆಕ್ ನೀರನ್ನು ರವಿವಾರ ಸಂಜೆ ನದಿಗೆ ಹರಿಬಿಡಲಾಯಿತು.

ಜಲಾಶಯದ ಗರಿಷ್ಠ ಮಟ್ಟ 2859 ಅಡಿಗಳಾಗಿದ್ದು, ಇಂದಿನ ಮಟ್ಟ 2854.65 ಅಡಿಗಳಾಗಿದ್ದು, ಸಂಜೆಯ ವೇಳೆ ಜಲಾಶಯದ ಒಳಹರಿವಿನ ಪ್ರಮಾಣ 6820 ಕ್ಯೂಸೆಕ್‌ಗಳಿಗೆ ಏರಿಕೆಯಾದ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರನ್ನು ನದಿಗೆ ಹರಿ ಬಿಡಲಾಗಿದೆಯೆಂದು ಜಲಾಶಯದ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮಿ ಐ.ಕೆ. ತಿಳಿಸಿದ್ದಾರೆ.

ರವಿವಾರ ಮಧ್ಯಾಹ್ನದ ವೇಳೆ 4500 ಕ್ಯೂಸೆಕ್ ನೀರು ಹರಿದು ಬರುತ್ತಿದ್ದರೆ, ಸಂಜೆಯ ವೇಳೆ ಈ ಪ್ರಮಾಣ ಏರಿಕೆಯಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಶೀಘ್ರವೇ ಜಲಾಶಯದ ನೀರಿನ ಮಟ್ಟ ಗರಿಷ್ಠ ಮಿತಿಯನ್ನು ತಲುಪಬಹುದೆಂದು ಹಾರಂಗಿ ಜಲಾಶಯದ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮಿ ಐ.ಕೆ. ತಿಳಿಸಿದ್ದಾರೆ.

ಈ ಹಿನ್ನೆಲೆ ಕಾವೇರಿ ನದಿ ಪಾತ್ರದಲ್ಲಿ ನೆಲೆಸಿರುವವರು ತಮ್ಮ ಆಸ್ತಿ ಹಾಗೂ ಜಾನುವಾರುಗಳ ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News