ಕೊಡಗು | ಕಾಫಿ ತೋಟಗಳಲ್ಲಿ ಎರಡು ಕಾಡಾನೆಗಳ ಕಳೇಬರಗಳು ಪತ್ತೆ

Update: 2024-05-25 16:43 GMT

ಮೃತಪಟ್ಟ ಕಾಡಾನೆಗಳು

ಮಡಿಕೇರಿ : ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿ ಎರಡು ಕಾಡಾನೆಗಳ ಕಳೇಬರಗಳು ಪತ್ತೆಯಾಗಿದೆ. ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆ ಬಳಿಯ ಕಾಫಿ ತೋಟ ಮತ್ತು ಕುಶಾಲನಗರ ತಾಲ್ಲೂಕಿನ ತ್ಯಾಗತ್ತೂರು ಗ್ರಾಮದ ತೋಟದಲ್ಲಿ ಕಾಡಾನೆಗಳ ಮೃತದೇಹ ಕಂಡು ಬಂದಿದೆ.

7ನೇ ಹೊಸಕೋಟೆ ಬಳಿಯ ಕಾಫಿ ತೋಟದಲ್ಲಿ ಅಂದಾಜು 20 ವರ್ಷದ ಕಾಡಾನೆಯ ಕಳೇಬರ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಮಡಿಕೇರಿ ಡಿಎಫ್‍ಓ ಭಾಸ್ಕರ್, ಎಸಿಎಫ್ ಗೋಪಾಲ್, ಆರ್ ಎಫ್‍ಓ ರತನ್, ಡಿಆರ್ ಎಫ್‍ಓ ದೇವಯ್ಯ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲೇ ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಿ, ಹೂಳಲಾಯಿತು. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಕಾಡಾನೆ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತ್ಯಾಗತ್ತೂರು ಗ್ರಾಮದ ತೋಟದಲ್ಲಿ ಅಂದಾಜು 20 ವರ್ಷ ಪ್ರಾಯದ ಗಂಡಾನೆ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕಾರ್ಮಿಕರು ಕಾಫಿ ತೋಟದೊಳಗೆ ಕೆಲಸಕ್ಕೆ ತೆರಳುವ ಸಂದರ್ಭ ಕಾಡಾನೆಯ ಮೃತದೇಹ ಕಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಾರದ ಹಿಂದೆಯೇ ಅನಾರೋಗ್ಯದಿಂದ ಕಾಡಾನೆ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ.

ವನ್ಯಜೀವಿ ಅರಣ್ಯ ಅಧಿಕಾರಿ ಡಾ. ಚಿಟ್ಟಿಯಪ್ಪ ಅವರು ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಗುಂಡಿ ತೋಡಿ ಕಾಡಾನೆಯ ಕಳೇಬರವನ್ನು ಹೂಳಲಾಯಿತು. ಸ್ಥಳಕ್ಕೆ ಮಡಿಕೇರಿ ಡಿಸಿಎಫ್ ಶಂಕರ್, ಸೋಮವಾರಪೇಟೆ ತಾಲೂಕು ಎಸಿಎಫ್ ಎ.ಎ.ಗೋಪಾಲ್, ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್, ಉಪವಲಯ ಅರಣ್ಯ ಅಧಿಕಾರಿ ಸುಬ್ರಾಯ, ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News