ಮಡಿಕೇರಿ: ಮದೆನಾಡು, ಮೊಣ್ಣಂಗೇರಿ ಭಾಗದಲ್ಲಿ ಲಘು ಭೂಕಂಪನ

Update: 2025-03-12 13:45 IST
ಮಡಿಕೇರಿ: ಮದೆನಾಡು, ಮೊಣ್ಣಂಗೇರಿ ಭಾಗದಲ್ಲಿ ಲಘು ಭೂಕಂಪನ

ಮದೆನಾಡಿನ ಗ್ರಂಥಾಲಯ

  • whatsapp icon

ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಮದೆನಾಡು ಮತ್ತು ಗಾಳಿಬೀಡು ಗ್ರಾ.ಪಂ ಪಂಚಾಯ್ತಿ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ ಲಘು ಭೂಕಂಪನವಾಗಿದ್ದು, ಇದರ ತೀವ್ರತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರದ ರಿಕ್ಟರ್ ಮಾಪಕದಲ್ಲಿ ದಾಖಲಾಗಿರುವಂತೆ 1.6 ಕಂಪನಾಂಕವನ್ನು ಹೊಂದಿತ್ತು.

ಇಂದು ಬೆಳಗ್ಗೆ 10.49 ಗಂಟೆಗೆ ಮದೆ ಗ್ರಾಮ ಪಂಚಾಯ್ತಿ ಮತ್ತು ಗಾಳಿಬೀಡು ಗ್ರಾಮ ಪಂಚಾಯ್ತಿಗೆ ಒಳಪಟ್ಟ ಮೊಣ್ಣಂಗೇರಿ ಗ್ರಾಮ ವ್ಯಾಪ್ತಿಯಲ್ಲಿ ಭೂ ಕಂಪನದ ಅನುಭವವಾಗಿದೆ. ಲಘು ಭೂಕಂಪನವಾಗಿರುವುದರಿಂದ ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲವೆಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ(ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.

ಕೆಎಸ್‌ಎನ್‌ಡಿಎಂಸಿ ದಾಖಲಿಸಿರುವ ಭೂ ಕಂಪನದ ಅಂಕಿ ಅಂಶಗಳಂತೆ ಭೂ ಕಂಪನದ ಕೇಂದ್ರವನ್ನು ಮದೆ ಪಂಚಾಯ್ತಿಯ ವಾಯುವ್ಯ ಭಾಗದ 2.4 ಕಿ.ಮೀ. ದೂರ ಮತ್ತು 5 ಕಿ.ಮೀ. ಆಳದಲ್ಲಿ ಗುರುತಿಸಲಾಗಿದೆ. ಇದರ ಪ್ರಭಾವ ಕೇಂದ್ರ ಸ್ಥಾನದಿಂದ ಗರಿಷ್ಠ 15 ರಿಂದ 20 ಕಿ.ಮೀ. ದೂರದವರೆಗೆ ಮಾತ್ರ ಇತ್ತು.

ಮದೆನಾಡು, ಮೊಣ್ಣಂಗೇರಿ, ಜೋಡುಪಾಲ, ದೇವಸ್ತೂರು ಮತ್ತು ಮಡಿಕೇರಿ ನಗರದ ಒಂದೆರಡು ಭಾಗದಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಸ್ಥಳೀಯ ನಿವಾಸಿಗಳು ಹೇಳಿಕೊಂಡಿದ್ದಾರೆ.

ಈ ರೀತಿಯ ಭೂಕಂಪನವು ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಇಂತಹ ಲಘು ಭೂಕಂಪನಗಳಲ್ಲಿ ಹಾನಿಯ ಸಾಧ್ಯತೆಯು ತುಂಬಾ ಕಡಿಮೆಯಾಗಿರುತ್ತದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.

ಮದೆನಾಡು ವ್ಯಾಪ್ತಿಯ ಕೆಲವು ಮಂದಿ ಸೂಕ್ಷ್ಮ ಕಂಪನವಾಗಿರುವುದನ್ನು ಗಮನಿಸಿದ್ದಾರೆ. ಮದೆನಾಡು ನಿವಾಸಿ ಇಬ್ರಾಹಿಂ ಅವರು, ತಾನು ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಒಂದು ಕ್ಷಣ ಗುಡುಗಿದ ಶಬ್ದ ಕೇಳಿತು ಎಂದು ಅನುಭವ ಹಂಚಿಕೊಂಡಿದ್ದಾರೆ.

ಮದೆ ಗ್ರಾ.ಪಂ ಸಿಬ್ಬಂದಿಗಳು ಕೂಡ ಕಚೇರಿಯಲ್ಲಿ ಕುಳಿತ್ತಿದ್ದಾಗ ಗುಡುಗಿದ ಶಬ್ದ ಕೇಳಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News