ಕೋಲ್ಕತ್ತಾದ ಐಎನ್‍ಐನಲ್ಲಿ ಕಮಾಂಡಿಂಗ್ ಆಫೀಸರ್ ಆಗಿ ಕ್ಯಾಪ್ಟನ್ ನಿತಿನ್ ಕಾರ್ಯಪ್ಪ ನೇಮಕ

ಮಡಿಕೇರಿ ಮಾ.12 : ಭಾರತೀಯ ನೌಕಾಪಡೆಯಲ್ಲಿ ಕ್ಯಾಪ್ಟನ್ ರ‍್ಯಾಂಕ್ ನಲ್ಲಿರುವ ಕೊಡಗಿನ ಮಾಳೇಟಿರ ನಿತಿನ್ ಕಾರ್ಯಪ್ಪ ಅವರು ಕೋಲ್ಕತ್ತಾದ ಐಎನ್‍ಐನಲ್ಲಿ ಕಮಾಂಡಿಂಗ್ ಆಫೀಸರ್ ಆಗಿ ನಿಯೋಜಿತರಾಗಿದ್ದಾರೆ.
ಮೂಲತಃ ಜಿಲ್ಲೆಯ ಕುಕ್ಲೂರುವಿನ ಇದೀಗ ಮೈಸೂರಿನ ಬೋಗಾದಿಯ ನಿವಾಸಿ ಆಗಿರುವಕ್ಯಾಪ್ಟನ್ ನಿತಿನ್ ಕಾರ್ಯಪ್ಪ, ಸೇಂಟ್ ಜೋಸೆಫ್ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು, ನಂತರ ರಾಷ್ಟ್ರೀಯ ಭಾರತೀಯ ಸೇನಾ ಕಾಲೇಜ್ ಡೆಹರಾಡೂನ್‍ನಲ್ಲಿ ತರಬೇತಿ ಪಡೆದು ಡಿಫೆನ್ಸ್ ಅಕಾಡೆಮಿಗೆ ಸೇರ್ಪಡೆಗೊಂಡರು.
ಈ ಹಿಂದೆ ಐಎನ್‍ಎಸ್ ಅಜಯ್, ಐಎನ್‍ಎಸ್ ಕಡ್ಮಟ್‍ನಲ್ಲಿ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು. ಇಸ್ಲಮಾಬಾದ್‍ನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಸಲಹೆಗಾರರಾಗಿ ಕೂಡ ಸೇವೆ ಸಲ್ಲಿಸಿದ್ದರು. ಇವರ ಪತ್ನಿ ರಾಷ್ಟ್ರೀಯ ಓಟಗಾರ್ತಿ ರೋಹಿಣಿ ಇತ್ತೀಚಿಗೆ ನಡೆದ ಟಾಟಾ ಮುಂಬೈ ಮೆರಥಾನ್‍ನಲ್ಲಿ ಭಾಗವಹಿಸಿ ಪೂರ್ಣ ಗುರಿ ತಲುಪಿಸಿದ್ದರು.
ಇವರು ಮೈಸೂರಿನ ಬೋಗಾದಿಯಲ್ಲಿ ನೆಲೆಸಿರುವ ಮಾಳೇಟಿರ ಗಣೇಶ್ ಬೋಪಣ್ಣ ಹಾಗೂ ದಿವಂಗತ ಕಾವೇರಿ ಬೋಪಣ್ಣ ಅವರ ಪುತ್ರ. ಇವರ ಕಿರಿಯ ಸಹೋದರ ನಯನ್ ಚಂಗಪ್ಪ ಮುಖ್ಯ ಮೆರಾಯಿನ್ ಇಂಜಿನಿಯರ್ ಆಗಿ ನ್ಯೂಝಿಲ್ಯಾಂಡಿನಲ್ಲಿದ್ದಾರೆ.